ರಾಜೂಗೌಡ
ಸುರಪುರ: ‘ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಗೆ ತಂದ ರೈತ ಪರ ಯೋಜನೆಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ, ಅನ್ನದಾತರಿಗೆ ಮೋಸ ಮಾಡಿದೆ’ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾನಿಧಿ ಹಾಗೂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ’ ಎಂದು ಹರಿಹಾಯ್ದರು.
‘ಒಬ್ಬ ಸಾಮಾನ್ಯ ರೈತ ಒಂದು ಪಂಪ್‍ಸೆಟ್‍ಗೆ ವಿದ್ಯುತ್ ಪರಿವರ್ತಕ ಪಡೆಯಲು ₹ 3 ಲಕ್ಷ ಪಾವತಿಸಬೇಕು. ಬಿತ್ತನೆ ಬೀಜದ ಮೇಲೆ ಪ್ರತಿ ಕ್ವಿಂಟಲ್‍ಗೆ ಶೇ 20ರಷ್ಟು ಬೆಲೆ ಹೆಚ್ಚಿಸಿದೆ. ಬರ ಪರಿಹಾರದ ₹ 3454 ಕೋಟಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ’ ಎಂದು ದೂರಿದರು.
‘6.30 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅವಶ್ಯಕತೆಯಿದ್ದು, ಕೇಂದ್ರ ಸರ್ಕಾರ 8.73 ಮೆ.ಟ. ಗೊಬ್ಬರ ನೀಡಿದೆ. ಹೆಚ್ಚುವರಿಯಾಗಿ 2.43 ಮೆ.ಟನ್ ಗೊಬ್ಬರ ಎಲ್ಲಿಗೆ ಹೋಯ್ತು? ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಇಳಿಯಿತೆ ಎಂಬುದನ್ನು ಮುಖ್ಯಮಂತ್ರಿಗಳೇ ತಿಳಿಸಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ 3400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಯಾರ ಪರವಾಗಿ ನಿಂತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಲಿನ ಪ್ರೋತ್ಸಾಹ ಧನ ನಿಲ್ಲಿಸಿದೆ. ಗೊಬ್ಬರದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಗೊಬ್ಬರದ ಅವಶ್ಯಕತೆ ನೀರಾವರಿ ಒಳಪಟ್ಟಂತಹ ಸುರಪುರ ಮತಕ್ಷೇತ್ರಕ್ಕೆ ಅವಶ್ಯಕತೆ ಇದೆ. ಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದಂತಹ ಲಾಠಿಚಾರ್ಜ್ ಸುರಪುರದಲ್ಲಿ ನಡೆಯುವ ಕಾಲ ದೂರವಿಲ್ಲ’ ಎಂದು ಹೇಳಿದರು.
‘ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿ. ಕೃಷಿ ಸಚಿವರು ನಮ್ಮಲ್ಲಿ ರಸಗೊಬ್ಬರದ ಕೊರತೆಯಿದೆ ಎನ್ನುತ್ತಾರೆ. ಮುಖ್ಯಮಂತ್ರಿ ಹಾಗೂ ಸಚಿವರ ಹೇಳಿಕೆಗಳಲ್ಲಿ ಸಾಮ್ಯತೆಯಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಹಲವಾರು ಪ್ರಭಾವಿ ರಾಜಕಾರಣಿಗಳ ಮನೆಗೆ ಯೂರಿಯಾ ಪೂರೈಕೆಯಾಗುತ್ತಿದೆ. ಅದರ ಬಗ್ಗೆ ಜಿಲ್ಲಾ ಕೃಷಿ ನಿರ್ದೇಶಕರು ಸ್ಪಷ್ಟೀಕರಣ ಕೊಡಬೇಕು. ನಮ್ಮ ಸುರಪುರ ಮತ ಕ್ಷೇತ್ರದ ಶಾಸಕರು ಸುಮ್ಮನಿದ್ದಾರೆ ಎಂಬುದಾಗಿ ಗೊಬ್ಬರ ಕೊಡುವುದನ್ನು ತಡೆದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಜಿಲ್ಲೆಯಲ್ಲಿ ಈಗಾಗಲೇ ಭತ್ತ ನಾಟಿ ಆರಂಭವಾಗಿದ್ದು, ನಾಲ್ಕೈದು ದಿನದಲ್ಲಿ ರಸಗೊಬ್ಬರ ಕೊಡಬೇಕು. ರಸಗೊಬ್ಬರ ದೊರೆಯದಿದ್ದರೆ ರೈತರು ರೊಚ್ಚಿಗೇಳಲಿದ್ದಾರೆ. ರೈತರಿಗೆ ಬೇಕಾದ ರಸಗೊಬ್ಬರ ಕೊಡಿ ಇಲ್ಲದಿದ್ದರೆ ರೈತರ ಸಿಟ್ಟು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ವೇಣುಮಾಧವ ನಾಯಕ, ದುರ್ಗಪ್ಪ ಎಳಿಮೇಲಿ, ಎಚ್.ಸಿ.ಪಾಟೀಲ, ಬಲಭೀಮ ನಾಯಕ, ಬಸವರಾಜ ಅನ್ಸೂರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.