ಹುಣಸಗಿ: ತಾಲ್ಲೂಕಿನ ಗ್ರಾಮಗಳಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ರೈತರು ಮಳೆಯಾಶ್ರಿತ ಪ್ರದೇಶದ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಜಮೀನು ಹದಗೊಳಿಸುವ ಹಾಗೂ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕಳೆದ ವಾರ ಮಳೆಯಾಗಿದ್ದು, ಸದ್ಯ ಮತ್ತೆ ಬಿಸಿಲಿನಿಂದ ಕೂಡಿದ ವಾತಾವರಣವಿದೆ. ಆದರೆ, ಮೃಗಶಿರಾ ಮಳೆ ಪ್ರವೇಶವಾಗಿದ್ದು, ಮಳೆಯ ದಾರಿಯನ್ನೇ ರೈತರು ಕಾಯುತ್ತಿದ್ದಾರೆ.
ಹುಣಸಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅಂದಾಜು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ 21 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರ ಹೊಂದಿದೆ. 18 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿಯನ್ನು ಹೊಂದಿದ್ದು, ಈ ಭೂಮಿಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ.
7,800 ಹೆಕ್ಟೇರ್ ತೊಗರಿ ಹಾಗೂ 9,800 ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು, 100 ಕ್ವಿಂಟಲ್‌ಗೂ ಅಧಿಕ ತೊಗರಿ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. 60 ಕ್ವಿಂಟಲ್ ವಿತರಿಸಲಾಗಿದೆ ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಮಾಹಿತಿ ನೀಡಿದ್ದಾರೆ.
ಸುಮಾರು 3,500 ಲೀ ಲಘು ಪೋಷಕಾಂಶಗಳು ಹಾಗೂ ಸಾವಿರ ಲೀ ಸಸ್ಯ ಸಂರಕ್ಷಣಾ ಕೀಟನಾಶಕ, ಎರೆಹುಳು ಗೊಬ್ಬರ ಲಭ್ಯವಿದ್ದು, ರೈತರು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಬಾರಿ ಕೂಡ ಬಹುತೇಕ ರೈತರು ತೊಗರಿ ಬಿತ್ತನೆಗೆ ಟ್ರ್ಯಾಕ್ಟರ್ ಬಳಕೆಗೆ ಮುಂದಾಗುತ್ತಿದ್ದು, ಹತ್ತಿ ಮಾತ್ರ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಬೋದ ಸಾಲಿನಲ್ಲಿ ಬಿತ್ತನೆ (ಊರುವುದು) ಮಾಡುತ್ತಿರುವುದಾಗಿ ರೈತರು ಹೇಳಿದರು. ತಾಲ್ಲೂಕಿನ ಕಲ್ಲದೇವನಹಳ್ಳಿ, ಬೆನಕನಹಳ್ಳಿ, ರಾಜನಕೋಳೂರು, ಗುಂಡಲಗೇರಾ, ಶ್ರೀನಿವಾಸಪುರ, ಮಾರಲಬಾವಿ ಸೇರಿದಂತೆ ಇತರ ಗ್ರಾಮಗಳಲ್ಲಿ ಹತ್ತಿ ಊರಲು ಬೋದ ಸಿದ್ಧಪಡಿಸಿಕೊಂಡಿದ್ದಾರೆ.
ಕಳೆದ ವಾರ ಸುರಿದ ಮಳೆಗೆ ಮಾರಲಬಾವಿ ಗ್ರಾಮದಲ್ಲಿ ತೊಗರಿ ಬಿತ್ತನೆ ಮಾಡಿದ್ದಾಗಿ ರೈತರಾದ ಪ್ರಕಾಶ ಬಡಿಗೇರ, ಹಣಮಂತ್ರಾಯ ನಾಯಕೋಡಿ, ಸಾಯಬಣ್ಣ, ಪೀರೋಜಿ ಸುಬೇದಾರ ಹೇಳಿದರು.
25 ಎಕರೆ ಹತ್ತಿ ಹಾಗೂ 10 ಎಕರೆ ತೊಗರಿ ಕಳೆದ ವಾರವೇ ಬಿತ್ತನೆ ಮಾಡಿದ್ದಾಗಿ ರಾಜನಕೋಳೂರು ಗ್ರಾಮದ ರೈತರಾದ ಯಂಕನಗೌಡ ವಠಾರ, ರಾಮನಗೌಡ ವಠಾರ ತಿಳಿಸಿದರು.
ಕೊಡೇಕಲ್ಲ ಗ್ರಾಮದ ಹೊರವಲಯಲ್ಲಿ (ಎರಿ ಪ್ರದೇಶದಲ್ಲಿ) ಶನಿವಾರ ಮಳೆಯಾಗಿದ್ದು, ಮೂರು–ನಾಲ್ಕು ದಿನಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಈಗಾಗಲೇ 10 ಎಕರೆ ತೊಗರಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೊಡೇಕಲ್ಲ ರೈತ ಮಲ್ಲಿಕಾರ್ಜುನ ಜಂಗಳಿ.
ತಾಲ್ಲೂಕಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನೀರು ಆಧಾರಿತ ಕೃಷಿ ಇದ್ದರೂ ಹುಣಸಗಿ ಹೋಬಳಿ ವ್ಯಾಪ್ತಿಯ ಗುಂಡಲಗೇರಾ, ಶ್ರೀನಿವಾಸಪುರ, ಅಮಲಿಹಾಳ ಹಾಗೂ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ರಾಜನಕೋಳೂರು, ಕೊಡೇಕಲ್ಲ, ಬಪ್ಪರಗಿ, ಹೊರಟ್ಟಿ ಸೇರಿದಂತೆ ಹೆಚ್ಚು ಪ್ರದೇಶವು ಮಳೆಯಾಶ್ರಿತ ಕೃಷಿ ಭೂಮಿಯನ್ನು ಹೊಂದಿದೆ.
‘ತಾಲ್ಲೂಕಿನ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 32,500 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಅದರಲ್ಲಿ ಅಂದಾಜು 29,500 ಹೆಕ್ಟೇರ್ ಸಾಗುವಳಿ ಕ್ಷೇತ್ರ ಹೊಂದಿದೆ. ಅದರಲ್ಲಿ ಅಂದಾಜು 12 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರವಿದೆ. ಪ್ರಮುಖವಾಗಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೀಪಾ ದೊರೆ ಮಾಹಿತಿ ನೀಡಿದರು.
‘ರಿಯಾಯಿತಿ ದರದಲ್ಲಿ ಸುಮಾರು 60 ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜ ದಾಸ್ತಾನು ಇದ್ದು, ಅದರಲ್ಲಿ ಈಗಾಗಲೇ 40 ಕ್ವಿಂಟಲ್ ರೈತರಿಗೆ ವಿತರಿಸಲಾಗಿದೆ. ಅಗತ್ಯವಿದ್ದಲ್ಲಿ ಮತ್ತೆ ಹೆಚ್ಚುವರಿಯಾಗಿ ತರಿಸಿ ವಿತರಿಸಲಾಗುವುದು’ ಎಂದು ದೀಪಾ ದೊರೆ ತಿಳಿಸಿದರು.
ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ರೈತರಿಗೆ ಬೀಜ ಹಾಗೂ ಲಘು ಪೋಷಕಾಂಶಗಳ ವಿತರಣೆಗೆ ತಯಾರಿ ಮಾಡಿಕೊಂಡಿದೆಸಿದ್ಧಾರ್ಥ ಪಾಟೀಲ ಕೃಷಿ ಅಧಿಕಾರಿ ಹುಣಸಗಿ
ತಾಲ್ಲೂಕಿನ ಶ್ರೀನಿವಾಸಪುರ ಮಂಜಲಾಪುರ ಗುಂಡಲಗೇರಾ ಸೇರಿದಂತೆ ಇತರ ಗ್ರಾಮಗಳಲ್ಲಿ ಹತ್ತಿ ಹಾಗೂ ತೊಗರಿ ಬಿತ್ತನೆ ಕಾರ್ಯ ಭಾನುವಾರದಿಂದ ಆರಂಭವಾಗಿದೆಪರಮಣ್ಣ ನೀಲಗಲ್ಲ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.