ಯಾದಗಿರಿ: ರೈತರಿಗೆ ಪಾವತಿಸಬೇಕಾದ ಸುಮಾರು ₹12 ಕೋಟಿ ಬಾಕಿ ನೀಡುವವರೆಗೂ ಜಿಲ್ಲೆಯ ವಡಗೇರಾ ಸಮೀಪದ ತುಮಕೂರು ಬಳಿ ಇರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಅರಿಯಲು ಅನುಮತಿ ನೀಡಬಾರದು ಎಂದು ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024 ರ ಸಾಲಿನಲ್ಲಿ 2,225 ಜನ ರೈತರಿಂದ ₹39 ಕೋಟಿ ಮೌಲ್ಯದ 3,59,523 ಮೆಟ್ರಿಕ್ ಟನ್ ಕಬ್ಬು ಖರೀದಿಸಿ ಕಾರ್ಖಾನೆ, ಇದರಲ್ಲಿ ಸುಮಾರು ₹12 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ತಿಳಿಸಿದರು.
ಬಾಕಿ ಹಣ ನೀಡುವಂತೆಯೇ ಪದೆ, ಪದೇ ಕೇಳಿದರೂ ಸತಾಯಿಸುತ್ತಿರುವ ಕಾರ್ಖಾನೆ ವಿರುದ್ಧ ಸಕ್ಕರೆ ಇಲಾಖೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಕೂಡಲೇ ಕಾರ್ಖಾನೆ ಮುಟ್ಟುಗೋಲು ಹಾಕಿ ಹರಾಜು ಮಾಡಿ ರೈತರ ಬಾಕಿ ಹಣ ಪಾವತಿಸುವಂತೆಯೇ ಕಳೆದ ಮೇ 23 ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ಇದರ ವಿರುದ್ಧ ಕಾರ್ಖಾನೆಯವರು ಕಲಬುರಗಿ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದು, ಅಲ್ಲಿ ವಾದ, ವಿವಾದ ಆಲಿಸಿದ ನ್ಯಾಯಾಲಯ, ಮಧ್ಯಂತರ ಆದೇಶ ನೀಡಿ ಮೇ 25 ರೊಳಗಾಗಿ ರೈತರ ಹಣ ಚುಕ್ತಾ ಮಾಡುವಂತೆಯೇ ಸ್ಪಷ್ಟವಾಗಿ ಹೇಳಿದೆ ಎಂದು ನಡೆದ ಘಟನಾವಳಿ ವಿವರಿಸಿದರು.
14 ದಿನದಲ್ಲಿ ಹಣ ಪಾವತಿಸದಿದ್ದರೇ ಶೇ 15 ರಷ್ಟು ಬಡ್ಡಿ ಹಣದೊಂದಿಗೆ ಇದ್ದ ಸಕ್ಕರೆ ಇತರೇ ವಸ್ತುಗಳನ್ನು ಹರಾಜು ಮಾಡಿ ಪಾವತಿಸಬೇಕೆಂದು ಹೈಕೋರ್ಟ್ ಆದೇಶ ಮಾಡಿದರೂ ಕಿಮ್ಮತ್ತು ಕೊಡದೇ ಮತ್ತೇ ಕಬ್ಬು ಅರಿಯಲು ಅರ್ಜಿ ಹಾಕಿದೆ ಎಂದು ತಿಳಿಸಿದರು.
ಈ ನಡುವೆ ಕಾಟಂ ದೇವರ ಹಳ್ಳಿಯ ರೈತ ರಮೇಶ ಬೋವಿ ಎಂಬುವವರು ಕಾರ್ಖಾನೆ ವಿರುದ್ಧ ಹಣ ಪಾವತಿಸದೇ ಮೋಸ ಮಾಡುತ್ತಿರುವ ಕುರಿತು ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ. ಕಾರಣ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮಹಾವೀರ ಲಿಂಗೇರಿ, ರವಿ ರಾಠೋಡ್, ರಾಜು ಚವಾಣ್, ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ, ಬನ್ನಪ್ಪ ದೊರೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.