ಸೈದಾಪುರ (ಯಾದಗಿರಿ ಜಿಲ್ಲೆ): ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಮಳಿಗೆಗಳಿಗೆ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಪಟ್ಟಣದ ಬಾಬು ಜಗಜೀವನರಾಂ ವೃತ್ತದ ಹತ್ತಿರದಲ್ಲಿ ಒಟ್ಟು 15 ಮಳಿಗೆಗಳ ಸಂಕೀರ್ಣದಲ್ಲಿ 9 ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಬೇಕರಿ, ಮೊಬೈಲ್, ರೇಡಿಯಂ, ಹೋಟೆಲ್, ಲೇಡೀಸ್ ಕಾರ್ನರ್, ಪ್ಲಂಬರ್ ಸಾಮಾಗ್ರಿಗಳ ಅಂಗಡಿಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿ ಕೆನ್ನಾಲಿಗೆಗೆ ಅಂಗಡಿ ಮುಂಗಟ್ಟುಗಳಲ್ಲಿನ ಕೊಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಅಗ್ನಿಶಾಮಕ ಠಾಣೆ ನಿರ್ಮಿಸದ ಇರುವುದಕ್ಕೆ ಜನರ ಆಕ್ರೋಶ:
'ಪಟ್ಟಣ ಹಾಗೂ ಸಮೀಪದ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಗ್ನಿ ಅವಘಡ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಈ ಭಾಗದಲ್ಲಿ ಒಂದು ಅಗ್ನಿ ಶಾಮಕ ದಳವನ್ನು ಸ್ಥಾಪನೆ ಮಾಡುತ್ತಿಲ್ಲ. ಇದರಿಂದ ಸುಮಾರು 35 ಕಿ. ಮೀ ದೂರದ ಯಾದಗಿರಿ ಜಿಲ್ಲಾ ಕೇಂದ್ರದಿಂದ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಎಲ್ಲವೂ ಸುಟ್ಟು ಹೋಗಿ ಬೂದಿ ಉಳಿಯುತ್ತಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಅನೇಕ ಬಾರಿ ಸಂಬಂಧಿಸಿದವರಿಗೆ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.