ಶಹಾಪುರ: ತಾಲ್ಲೂಕಿನ ರೋಜಾ ಗ್ರಾಮದ ಸುತ್ತ ನೀರು ಸುತ್ತುವರೆದಿದ್ದು, ಸಂಪರ್ಕ ಕಡಿತಗೊಂಡು ದ್ವೀಪದಂತಾಗಿದೆ.
ಗ್ರಾಮದಲ್ಲಿ ಭೀಮಾ ನದಿ ನೀರು ಸುತ್ತುವರೆದ ಪರಿಣಾಮ, ಗ್ರಾಮಸ್ಥರನ್ನು ಹೊಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ‘ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲಾಗಿದೆ. ಇಡೀ ಗ್ರಾಮದಲ್ಲಿ 70 ಮುಸ್ಲಿಂ ಕುಟುಂಬಗಳಿವೆ. 250 ಜನಸಂಖ್ಯೆ ಇದೆ. 14 ಜನ ಅಲ್ಲಿಯೇ ಉಳಿದುಕೊಂಡಿದ್ದಾರೆ. ಬೋಟ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನಿಯೋಜಿಸಿದೆ’ ಎಂದರು.
‘ತಾಲ್ಲೂಕಿನ ಹುರಸಗುಂಡಗಿ ಗ್ರಾಮದ 5 ಕುಟುಂಬಗಳನ್ನು ನವನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 180 ಜನರು ತಾತ್ಕಾಲಿಕವಾಗಿ ಆಸರೆ ಪಡೆದುಕೊಂಡಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್‌ಪಿ ಪೃಥ್ವೀಕ್ ಶಂಕರ್, ಕೃಷಿ ಇಲಾಖೆಯ ಜೆಡಿ ರೀತೇಂದ್ರನಾಥ ಸೂಗೂರ, ತಹಶೀಲ್ದಾರ್ ಸಿದ್ಧರೂಢ ಬನ್ನಿಕೊಪ್ಪ, ಕೃಷಿ ಅಧಿಕಾರಿ ಸುನೀಲಕುಮಾರ, ಎಇಇ ಸೂಗೂರೆಡ್ಡಿ, ರಾಜು ದೇಶಮುಖ, ಮುಖಂಡರಾದ ರಾಜು ಅಣಬಿ, ಗ್ಯಾನಪ್ಪ ಅಣಬಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಮಳೆಗಳು ಪ್ರವಾಹಕ್ಕೆ ತುತ್ತಾಗಿವೆ. ಮಂಗಳವಾರ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಹಾನಿಗೊಳಗಾದ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಹದಗೆಟ್ಟ ರಸ್ತೆ ದುರಸ್ತಿಗೆ ₹50ಕೋಟಿ ರೈಲ್ವೆ ಹಾಗೂ ಭಾರತಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದರಿಂದ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರಲಿಲ್ಲ. ರಸ್ತೆ ದುರಸ್ತಿಗೆ ₹50 ಕೋಟಿ ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಶಹಾಪುರ-ಶಿರವಾಳ ₹ 9.70 ಕೋಟಿ ಶಿರವಾಳ-ಹೊಸೂರ ₹ 15 ಕೋಟಿ ಅಣಬಿ-ಮುಡಬೂಳ ₹ 5 ಕೋಟಿ ಮಡ್ನಾಳ-ಇಂಗಳಗಿ ₹ 3 ಕೋಟಿ ಹೀಗೆ ರಸ್ತೆ ದುರಸ್ತಿಗೆ ಅನುದಾನ ನೀಡಲಾಗಿದೆ. ತ್ವರಿತವಾಗಿ ರಸ್ತೆ ಕಾಮಗಾರಿ ನಡೆಯಲಿದೆ ಎಂದರು.
ಶೌಚಾಲಯ ಸೌಲಭ್ಯವಿಲ್ಲ ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಈಗ ಸರ್ವಸ್ವ ತೊರೆದು ಕಾಳಜಿ ಕೇಂದ್ರದಲ್ಲಿ ನೆಲೆಸಿದ್ದೇವೆ. ಊಟ ವಸತಿ ಇದೆ. ಆದರೆ ಶೌಚಾಲಯ ಸೌಲಭ್ಯವಿಲ್ಲ. ನಮಾಜ ಮಾಡಲು ತೊಂದರೆಯಾಗಿದೆ ಎಂದು ಕಾಳಜಿ ಕೇಂದ್ರದಲ್ಲಿ ನೆಲೆಸಿದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.