ಯಾದಗಿರಿ: ‘ನೆರೆಯಿಂದ 75 ಪರ್ಸೆಂಟಲ್ಲ, 100 ಪರ್ಸೆಂಟ್ ಹತ್ತಿ, ಕವಳಿ (ಭತ್ತ) ಹಾಳಾಗಿವೆ. ನೀರು ಇಳಿದು ಒಂದು ತಿಂಗಳಾದರೂ ನೆಲ ಒಣಗಲ್ಲ. ಮಳೆ, ಪ್ರವಾಹ, ಬೆಳೆ ಹಾನಿಯಿಂದ ರೈತರಿಗೆ ಎಣ್ಣೆ ಕುಡಿಯುವ ಪರಿಸ್ಥಿತಿ ಬಂದಿದೆ ಸರ್...’
–ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಭಾನುವಾರ ಜಿಲ್ಲೆಯ ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ವಡಗೇರಾ ತಾಲ್ಲೂಕಿನ ಗೋಡಿಯಾಳ ಗ್ರಾಮದ ರೈತ ಸಂಗಾರೆಡ್ಡಿ ಅವರು ತಮ್ಮ ಸಮಸ್ಯೆಯನ್ನು ತೋಡಿಕೊಂಡ ಪರಿ ಇದೆ.
ನೆರೆಯಿಂದ ಹಾನಿಯಾದ ಭತ್ತದ ಗದ್ದೆಯನ್ನು ವೀಕ್ಷಿಸುವಾಗ ಅಧಿಕಾರಿಯೊಬ್ಬರು ಶೇ 75ರಷ್ಟು ಬೆಳೆ ಹಾನಿಯಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಅಲ್ಲಿಯೇ ಇದ್ದ ಸಂಗಾರೆಡ್ಡಿ ಅವರು, ‘75 ಪರ್ಸೆಂಟ್ ಅಲ್ಲ ಸರ್, 100 ಪರ್ಸೆಂಟ್ ಹಾಳಾಗಿ ಕೆಲಸಕ್ಕೆ ಬಾರದಂತೆ ಆಗಿದೆ. ಈ ಹಿಂದೆ ಪ್ರವಾಹ ಬಂದಿದ್ದಾಗ ಎನ್‌ಡಿಆರ್‌ಎಫ್ ತಂಡ ನಮ್ಮ ಊರಿಗೆ ಬಂದಿತ್ತು. ಈ ಬಾರಿ ಒಬ್ಬ ಪೊಲೀಸರೂ ಬಂದಿಲ್ಲ. ಮೇಲಿಂದ ನೀರು ಬಿಡುವ ಬಗ್ಗೆ ಮಾಹಿತಿಯೂ ನೀಡಿಲ್ಲ. ಹೊಳೆ ದಂಡೆಯಲ್ಲಿ ದನ– ಕರುಗಳು, ಮನುಷ್ಯರು ಇರುತ್ತಾರೆ’ ಎಂದು ಕಿಡಿಕಾರಿದರು.
ಕುಮನೂರಿನ ರೈತ ಕುಮಲಪ್ಪ ಹಣಮಂತರಾಯ ಅಂಗಡಿ ಅವರು ದಶಕಗಳ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ‘ಕಂದಳ್ಳಿ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್‌ನ 300ಕ್ಕೂ ಅಧಿಕ ಗೇಟ್‌ಗಳು ತುಕ್ಕು ಹಿಡಿದಿವೆ. ಪ್ರವಾಹ ಬಂದಾಗ ಮೇಲಕ್ಕೆ ಎತ್ತಲು ಆಗುತ್ತಿಲ್ಲ. ಇದರಿಂದ ನೆರೆಯ ನದಿ ನೀರು ಐದಾರು ಗ್ರಾಮಗಳ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿಕೊಳ್ಳುತ್ತದೆ. ನಮ್ಮ ಸುತ್ತಲೂ ನಿಂತಿರುವ ನೀರು ತುಕ್ಕು ಹಿಡಿದ ಗೇಟ್‌ಗಳ ಪ್ರಭಾವದಿಂದಾಗಿಯೇ’ ಎಂದು ಹೇಳಿದರು.
‘ಬ್ಯಾರೇಜ್‌ನಲ್ಲಿ ಆದಷ್ಟು ಬೇಗ ಹೊಸ ಗೇಟ್‌ಗಳನ್ನು ಅಳವಡಿಸಿ, ವಡಗೇರಾ ತಾಲ್ಲೂಕು ಸೇರಿದಂತೆ ಪಕ್ಕದ ರಾಯಚೂರಿನ ಗ್ರಾಮಗಳಿಗೂ ಅನುಕೂಲ ಮಾಡಿಕೊಡಬೇಕು. ಎಂಜಿನಿಯರ್‌ಗಳ ಗಮನಕ್ಕೂ ತಂದರೂ ಪ್ರಯೋಜನ ಆಗಿಲ್ಲ’ ಎಂದು ಅಳಲು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ ಅವರು, ‘ಬ್ಯಾರೇಜ್‌ನ ಗೇಟ್‌ಗಳನ್ನು ಎತ್ತಿದಾಗ ನೀರು ಹರಿದು ಹೋಗುಂತೆ ಆಗಬೇಕು. ಇಳಿಸಿದಾಗ ನೀರು ನಿಲ್ಲಬೇಕಾಗುತ್ತದೆ. ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ತರಲಾಗುವುದು’ ಎಂದರು. ಅಲ್ಲಿಯೇ ಇದ್ದ ಅಧಿಕಾರಿಯೊಬ್ಬರು ಕುಮಲಪ್ಪ ಅವರೊಂದಿಗೆ ಮಾತನಾಡಿ, ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದರು.
ಅಲಿಪುರ ತಾಂಡಾ, ಅಲಿಪುರ ಗ್ರಾಮಗಳಲ್ಲಿ ಅತಿ ವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು. ಡಾನ್ ಬಾಸ್ಕೋ ಶಾಲೆ ಸಮೀಪ ಮುಳುಗಡೆಯಾದ ಸೇತುವೆ, ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್, ಮುಳುಗಡೆಯಾದ ಜಲಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಸಚಿವರನ್ನು ಭೇಟಿಯಾದ ಬಹುತೇಕ ರೈತರು ಹಾನಿಯಾದ ಬೆಳೆಗಳ ಮರು ಸಮೀಕ್ಷೆ ಮಾಡಿ, ಹೆಚ್ಚಿನ ಪರಿಹಾರ ಕೊಡಿಸುವಂತೆ ಕೋರಿದರು.
ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಸಂಜೀವ್ ಸ್ಯಾಮ್ಸನ್ ಮಾಳಿಕೇರಿ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಯಾಮ್ಸನ್ ಮಾಳಿಕೇರಿ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಹಾನಿಯಾದ ಬೆಳೆಯ ಮರು ಸಮೀಕ್ಷೆ’ ‘ಈ ಹಿಂದಿನ ಬೆಳೆ ಸಮೀಕ್ಷೆಯಲ್ಲಿ ಸುಮಾರು 27 ಸಾವಿರ ಹೆಕ್ಷೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿತ್ತು. ಭೀಮಾ ಪ್ರವಾಹ ಯಥೇಚ್ಛ ಮಳೆಯಿಂದ ಈಗ 1.11 ಲಕ್ಷಕ್ಕೂ ಅಧಿಕ ಬೆಳೆಹಾನಿಯಾದ ಅಂದಾಜಿದೆ. ಹೀಗಾಗಿ ಜಂಟಿಯಾಗಿ ಮರು ಸಮೀಕ್ಷೆ ಮಾಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಭಾನುವಾರ ನೆರೆ ಪೀಡಿತ ಪ್ರದೇಶಗಳ ಭೇಟಿಯ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ ನೆರೆಯ ಮಾಹಿತಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ‘ಪ್ರವಾಹದ ಎಲ್ಲ ಪರಿಸ್ಥಿತಿಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಆಡಳಿತರೂಢ ಸರ್ಕಾರ ವಿರೋಧ ಪಕ್ಷ ಸಂಘಟನೆಗಳು ಜನರ ಪರವಾಗಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಎನ್‌ಡಿಆರ್ ನಿಯಮ ಪ್ರಕಾರ ಪರಿಹಾರ ಕೊಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿಯೂ ಇದೆ’ ಎಂದು ಹೇಳಿದರು. ‘ಪ್ರವಾಹಕ್ಕೆ ಒಳಗಾದ ಗ್ರಾಮಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿ ಇದ್ದರೂ ಸರಿಯಾದ ವ್ಯವಸ್ಥೆ ಮಾಡುವುದು ಜಿಲ್ಲಾಡಳಿತದ ಹೊಣೆಗಾರಿಕೆಯಾಗಿದೆ’ ಎಂದರು.
ಸಚಿವರನ್ನು ಕರೆದೊಯ್ದು ಸಮಸ್ಯೆಗಳು ತೋರಸಿದ ಗ್ರಾಮಸ್ಥರು ಕುಮನೂರಿಗೆ ಭೇಟಿ ನೀಡಿ ವಾಪಸ್ ತೆರಳುತ್ತಿದ್ದ ಸಚಿವ ದರ್ಶನಾಪುರ ಅವರನ್ನು ಹಾಲಗೇರಾದ ಗ್ರಾಮಸ್ಥರು ತಡೆದು ನಿಲ್ಲಿಸಿದರು. ‘ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಹಿಳೆಯರೂ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು ಗ್ರಾಮದ ಸುತ್ತಲೂ ನೀರು ಆವರಿಸಿದೆ. ಈಗ ಶೌಚಾಲಯ ಇಲ್ಲದೆ ಪರದಾಡುವಂತೆ ಆಗಿದೆ. ಚರಂಡಿಯ ಕೊಳಚೆ ನೀರು ಸಹ ಸರಿಯಾಗಿ ಹರಿದು ಹೋಗುತ್ತಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಸರ್ಕಾರಿ ಶಾಲೆ ಸಹ ಹಳೆದಾಗಿ ಶಿಥಿಲವಾಗಿದೆ. ಜೀವ ಭಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು. ತಮ್ಮೊಂದಿಗೆ ಬಂದು ಸಮಸ್ಯೆಗಳನ್ನು ಕಣ್ಣಾರೆ ನೋಡುವಂತೆ ಪಟ್ಟು ಹಿಡಿದರು. ಗ್ರಾಮಸ್ಥರ ಒತ್ತಾಸೆಗೆ ಮಣಿದು ಸಚಿವರು ಅಧಿಕಾರಿಗಳು ಕೆಸರುಮಯವಾದ ರಸ್ತೆಯಲ್ಲಿ ಗ್ರಾಮದಲ್ಲಿ ಅವ್ಯಸ್ಥೆಯನ್ನು ವೀಕ್ಷಿಸಿದರು. ‘ಗ್ರಾಮದಲ್ಲಿ ತಕ್ಷಣವೇ ಕೊಳವೆ ಬಾವಿಯನ್ನು ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೂ ಆದ್ಯತೆ ಕೊಡಬೇಕು’ ಎಂದು ಸ್ಥಳೀಯ ಅಧಿಕಾರಿಯೊಬ್ಬರಿಗೆ ಸೂಚಿಸಿದರು. ಶಾಲೆಯ ಕಟ್ಟಡಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೂ ಸಚಿವರು ತಾಕೀತು ಮಾಡಿದರು.
‘ಧೈರ್ಯ ತುಂಬುವ ಮಾತಗಳು ಆಡಲಿಲ್ಲ’ ‘ಸಚಿವರು ಶಾಸಕರು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವೇ ನಮ್ಮ ಗ್ರಾಮಕ್ಕೆ ಬಂದಿತ್ತು. ಯಾರೂ ಭಯಪಡಬೇಡಿ ನಾವು ಅಧಿಕಾರಿಗಳು ನಿಮ್ಮೊಂದಿಗೆ ಇದ್ದೇವೆ ಎನ್ನುವ ಎರಡು ಧೈರ್ಯದ ಮಾತುಗಳನ್ನು ಆಡಲಿಲ್ಲ’ ಎಂದು ಕುಮನೂರಿನ ಕೆಲ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ‘ನದಿ ಪ್ರವಾಹವು ನಿಸರ್ಗದತ್ತ ಆಗಿರುವಂತಹದ್ದು. ಮನುಷ್ಯರು ಮಾಡಿದ್ದಲ್ಲ ಎಂಬುದು ನಮಗೂ ಗೊತ್ತಿದೆ. ಪರಿಹಾರದ ಹಣದ ಮಾತಿರಲಿ ಸುರಕ್ಷಿತವಾಗಿ ಇರುವಂತೆಯೂ ಹೇಳಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.