ಯಾದಗಿರಿ: ‘ಸಾರ್ವಜನಿಕರಲ್ಲಿ ಕಂಡು ಬರುವ ಸಣ್ಣಪುಟ್ಟ ರೋಗಗಳ ಚಿಕಿತ್ಸೆಗೆ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆಯಬೇಕು’ ಎಂದು ಅವಿಜ್ಞಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಸುನೀಲಕುಮಾರ ಪಾಟೀಲ ಹೇಳಿದರು.
ಇಲ್ಲಿನ ಲಕ್ಷ್ಮಿ ನಗರದಲ್ಲಿನ ಲಕ್ಷ್ಮಿ ಮಾರುತಿ ದೇವಸ್ಥಾನದಲ್ಲಿ ಅವಿಜ್ಞಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,
ಶಶಿ ಚಾರಿಟಬಲ್ ಟ್ರಸ್ಟ್ ಹಾಗೂ ವಿಜಯ ವಿಠ್ಠಲ್ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾರ್ವಜನಿಕರಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಮಸ್ಯೆಯ ಪ್ರಾಥಮಿಕ ಹಂತದಲ್ಲೇ ವೈದ್ಯರನ್ನು ಕಾಣಬೇಕು. ಜನರಿಗಾಗಿಯೇ ಇಂತಹ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಿದ್ದು, ರೋಗ ಲಕ್ಷಣ ಇರುವವವರು ಭಯ ಪಡದೇ ಇಂತಹ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯವಂತರಾಗಬೇಕು’ ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಹಣಮಂತ ಇಟಗಿ ಮಾತನಾಡಿ, ‘ಇಂತಹ ಆರೋಗ್ಯ ಶಿಬಿರಗಳು ಸಾರ್ವಜನಿಕರಿಗೆ ಇನ್ನು ಹೆಚ್ಚೆಚ್ಚು ನಡೆಸುವ ಮೂಲಕ ಸಾರ್ವಜನಿಕರ ನೆರವಾಗಬೇಕು. ಹಾಗೆಯೇ ಜನರು ಸಸಿಗಳನ್ನು ಪಡೆದು ಪ್ರತಿಯೊಬ್ಬರು ಅವುಗಳನ್ನು ನೆಟ್ಟು ಗಿಡ–ಮರಗಳಾಗಿ ಪೋಷಿಸಬೇಕು. ಈ ಮೂಲಕ ಪರಿಸರ ಕಾಪಾಡಲು ಸಹಕರಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಶಶಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹಣಮಂತಪ್ಪ ಶಿರಗೋಳ, ಲಕ್ಷ್ಮಿ ಮಾರುತಿ ದೇವಸ್ಥಾನದ ಅಧ್ಯಕ್ಷ ಸದಾಶಿವಪ್ಪ, ರೋಟ್ನಡಗಿ ಸ್ಕ್ಯಾನಿಂಗ್ ಸೆಂಟರ್ ವೈದ್ಯೆ ಸುಷ್ಮಾರೆಡ್ಡಿ, ಶಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ, ನಿವೃತ್ತ ಪಿಎಸ್‌ಐ ಖಾಜಾ ಮೈನುದ್ದಿನ್, ಸಿಆರ್‌ಸಿ ರವಿಚಂದ್ರ ನಾಯ್ಕಲ್, ಸಂಗೀತಾ ಶಿರಗೋಳ್, ಲಿಂಗಾರೆಡ್ಡಿ, ವಿರೂಪಾಕ್ಷಿ, ನಿವೃತ್ತ ಶಿಕ್ಷಕ ಶರಣಪ್ಪ ಕ್ಯಾತನಾಳ, ವಿಜಯ ವಿಠ್ಠಲ ಸಂಸ್ಥೆ ಅಧ್ಯಕ್ಷ ವಿಠ್ಠಲ ಕುಲಕರ್ಣಿ, ಮಾಳಪ್ಪ ಯಾದವ್ ಕಾಡಂಗೇರಾ ಭಾಗವಹಿಸಿದ್ದರು.
ಈ ವೇಳೆ ನೂರಾರು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ವಿವಿಧ ರೋಗಗಳನುಗುಣವಾಗಿ ಔಷಧೋಪಚಾರ ನೀಡಲಾಯಿತು. ಜೊತೆಗೆ ವಿವಿಧ ತಳಿಯ ಸಸಿಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.