ADVERTISEMENT

ಸ್ವಾತಂತ್ರ್ಯ ತ್ಯಾಗ, ಬಲಿದಾನದ ಸಂಕೇತ

ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ, ಧ್ವಜಾರೋಹಣ ನೆರವೇರಿಸಿದ ಸಚಿವ ಚವಾಣ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:31 IST
Last Updated 15 ಆಗಸ್ಟ್ 2022, 16:31 IST
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಪ್ರಭು ಚವಾಣ್ ಧ್ವಜಾರೋಹಣ ನೆರವೇರಿಸಿದರು
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಪ್ರಭು ಚವಾಣ್ ಧ್ವಜಾರೋಹಣ ನೆರವೇರಿಸಿದರು   

ಯಾದಗಿರಿ: ‘ಸ್ವಾತಂತ್ರ್ಯವೆಂಬುವುದು ನಮ್ಮ ಪೂರ್ವಜರ ತ್ಯಾಗ, ಬಲಿದಾನದ ಸಂಕೇತವಾಗಿದೆ. ಸಾವಿರಾರು ದೇಶಭಕ್ತರು, ಹೋರಾಟಗಾರರ, ತ್ಯಾಗ, ಬಲಿದಾನದಿಂದ ಲಭಿಸಿರುವ ಸ್ವಾತಂತ್ರ್ಯ ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರದಾಗಿದೆ’ ಎಂದು ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಭಾರತ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಲ್ಲ ರಾಜ್ಯಗಳು ‘ಮನೆ ಮನೆಯಲ್ಲೂ ತಿರಂಗಾ’ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಕರ್ನಾಟಕ ಹಾಗೂ ಯಾದಗಿರಿ ಜಿಲ್ಲೆಯ ರಾಷ್ಟ್ರಾಭಿಮಾನಿಗಳು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಪ್ರದರ್ಶಿಸಿದ್ದಕ್ಕೆ ಈ ಸಂದರ್ಭದಲ್ಲಿ ಎಲ್ಲರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಜಿಲ್ಲೆಯ ಎಲ್ಲ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸಿ, ಉತ್ತಮ ನಾಗರಿಕ ಸೌಲಭ್ಯಗಳನ್ನು ನೀಡಲು ಆದ್ಯತೆ ನೀಡಲಾಗಿದೆ. ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಗಿರಿನಾಡು ಎಂದೇ ಖ್ಯಾತಿ ಪಡೆದಿರುವ ಯಾದಗಿರಿ ಜಿಲ್ಲೆ ದೇಶದ ಹತ್ತು ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಅಭಿವೃದ್ದಿಯಲ್ಲಿ 9 ನೇ ಸ್ಥಾನಗಳಿಸಿದ್ದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿರುತ್ತಾರೆ. ಇದಕ್ಕಾಗಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಸರೋವರ ಯೋಜನೆಯಡಿ 102 ಕೆರೆಗಳನ್ನು ಗುರುತಿಸಲಾಗಿದ್ದು, 59 ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಕಾಮಗಾರಿನು ಪ್ರಾರಂಭಿಸಲಾಗಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿಗಾಗಿ ವಾಹನಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈಗ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ಜಿಲ್ಲೆಯ ಒಟ್ಟು 710 ಜನ ವಸತಿಗಳಿಗೆ ಪ್ರತಿ ಮನೆಗೆ (ಹರ್ ಘರ್ ಜಲ್) ನಲ್ಲಿಯನ್ನು ಅಳವಡಿಸುವ ಮೂಲಕ ನೀರನ್ನು ಪೂರೈಸುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2.32 ಲಕ್ಷ ಮನೆಗಳಿದ್ದು, ಇಲ್ಲಿಯವರೆಗೆ 1.12 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ.ಜಾನುವಾರುಗಳ ದತ್ತು ಯೋಜನೆಯಲ್ಲಿ ಪುಣ್ಯ ಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ₹11,000 ಪಾವತಿಸಿ ದತ್ತು ಪಡೆಯಬಹುದು. ಗೋಶಾಲೆಗಳಲ್ಲಿ ಒಂದು ದಿನಕ್ಕೆ ₹70 ಇಷ್ಟದ ರಾಸುಗಳಿಗೆ ಮೇವಿಗಾಗಿ ವಂತಿಗೆ ನೀಡಬಹುದು. ಇದಕ್ಕೆ 80 ಜಿ ಆದಾಯ ತೆರಿಗೆ ವಿನಾಯಿತ ಸಿಗಲಿದೆ
ಎಂದರು.

ಈ ಗೋಶಾಲೆಗಳಲ್ಲಿ ಇರುವ ಗೋಸಂಕುಲದ ರಕ್ಷಣೆಗಾಗಿ ಜಾನುವಾರುಗಳ ದತ್ತು, ಪಡೆಯಲು ತಮ್ಮ ಇಚ್ಛೆ ಅನುಸಾರವಾಗಿ ದೇಣಿಗೆಯನ್ನು ಪುಣ್ಯ ಕೋಟಿ ಪೋರ್ಟಲ್ punyakoti.karahvs.in ನಲ್ಲಿ ಆನ್‌ಲೈನ್ ಮುಖಾಂತರ ಸಹಾಯ ಹಸ್ತ ನೀಡಲು ಮನವಿ ಮಾಡುತ್ತೇನೆ.ಪಶುಪಾಲನಾ ಇಲಾಖೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಜಾನುವಾರುಗಳನ್ನು ಗೋಶಾಲೆಯಲ್ಲಿ ಸಾಕುವ ಹಾಗೂ ನಿರ್ವಹಣೆಗಾಗಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ನೂರು ಗೋ ಶಾಲೆ, ನೂರು ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. 400 ಪಶುವೈದ್ಯರ ನೇಮಕಾತಿ, ರೈತರಿಗೆ ಪ್ರತಿ ಲೀಟರ್ ಹಾಲಿಗೆ ಆರು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ಕೆಕೆಆರ್‌ಡಿಬಿಯಿಂದ 2013-14ನೇ ಸಾಲಿನಿಂದ 2022-23ನೇ ಸಾಲಿನ ವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಒಟ್ಟು 1110.70 ಕೋಟಿ ಅನುದಾನದೊಂದಿಗೆ 3361 ಕಾಮಗಾರಿಗಳು ಅನುಮೋದನೆಯಾಗಿರುತ್ತವೆ. ಅವುಗಳಲ್ಲಿ ಇಲ್ಲಿಯವರೆಗೆ 2744 ಕಾಮಗಾರಿಗಳು ಪೂರ್ಣಗೊಂಡು ₹745.64 ಕೋಟಿ ವೆಚ್ಚ ಭರಿಸಲಾಗಿರುತ್ತದೆ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ
ಎಂದರು.

ಈ ವೇಳೆ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ, ಕರ್ನಾಟಕ ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರನಾಥ ಕೆ.ನಾದ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ನಗರಾಭಿವೃಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಯೂಡಾ ಆಯುಕ್ತ ಬಕ್ಕಪ್ಪ ಹೊಸಮನಿ ಇದ್ದರು.

***

ಲ್ಯಾಪ್‌ಟಾಪ್‌ ವಿತರಣೆ

ಸಚಿವ ಪ್ರಭು ಚವಾಣ್‌, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಅಂಗವಿಲಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ಪ್ರೋತ್ಸಾಹ ಧನ ನೀಡಿ ಪ್ರಶಸ್ತಿ ಪತ್ರ ನೀಡಿದರು.

ಸ್ಟೇಷನ್‌ ಬಜಾರ್‌ ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೆ ಮನಸೋತು ₹5,000 ನಗದು ಬಹುಮಾನ ಘೋಷಣೆ ಮಾಡಿದರು. ನಂತರ 5 ತಂಡಗಳಿಗೂ ₹5 ಸಾವಿರ ವಿತರಿಸಿ ವಿದ್ಯಾರ್ಥಿಗಳ ಸಂಭ್ರಮ ಹೆಚ್ಚಿಸಿದರು. ಇದರ ಜೊತೆಗೆ ಜಿಲ್ಲಾ ಆಡಳಿತ, ‍ಪೊಲೀಸ್‌ ಇಲಾಖೆ ಅಧಿಕಾರಿಗಳು ನಗದು ಬಹುಮಾನ ವಿತರಿಸಿದರು.

***

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಿಗೆ ತಲಾ 1 ರಂತೆ, 10 ಯುವಕರ ತಂಡವನ್ನು ರಚಿಸಿ ಸ್ವಾಮಿ ವಿವೇಕಾನಂದ ಯುವಕರ ಸ್ವ- ಸಹಾಯ ಸಂಘ ಎಂದು ನೋಂದಣಿ ಮಾಡಿಸಲಾಗಿದೆ
ಪ್ರಭು ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.