ADVERTISEMENT

ಆ.19 ರಿಂದ ದ್ವಿತೀಯ ಪಿಯು ಪರೀಕ್ಷೆ, 3 ಪರೀಕ್ಷಾ ಕೇಂದ್ರ, 496 ವಿದ್ಯಾರ್ಥಿಗಳು

3 ಪರೀಕ್ಷಾ ಕೇಂದ್ರ, 496 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 16:26 IST
Last Updated 16 ಆಗಸ್ಟ್ 2021, 16:26 IST
ಡಾ.ರಾಗಪ್ರಿಯಾ ಆರ್.
ಡಾ.ರಾಗಪ್ರಿಯಾ ಆರ್.   

ಯಾದಗಿರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಿರಸ್ಕರಿಸಿ ಪುನಃ ಪರೀಕ್ಷೆ ಬರೆಯಲು ಆಸಕ್ತಿ ತೋರಿದವರಿಗೆ ಹಾಗೂ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಇದೇ ಆಗಸ್ಟ್‌ 19 ರಿಂದ ಸೆಪ್ಟೆಂಬರ್ 3ರವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಪ್ರಕಟಿಸಲಾಗಿರುವ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯ 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 90 ಪದವಿ ಪೂರ್ವ ಕಾಲೇಜುಗಳನ್ನು ಒಳಗೊಂಡಂತೆ 496 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ ಆರೋಗ್ಯ ಸಲಕರಣೆಯೊಂದಿಗೆ ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇಧ ಪ್ರದೇಶ ಎಂದು ಜಿಲ್ಲಾಧಿಕಾರಿ ಘೋಷಿಸಿದರು. ಸುತ್ತಲಿನ ಜಿರಾಕ್ಸ್, ಕಂಪ್ಯೂಟರ್ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‌ಗಳ ನೇಮಕ ರದ್ದುಪಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು ಎಂದರು.

ಕೇಂದ್ರದ ಮುಖ್ಯ ಅಧಿಕ್ಷಕರು ‘ಬೆಸಿಕ್ ಸೆಟ್’ ಫೋನ್‌ ಮಾತ್ರ ಬಳಸಬಹುದು. ಆದರೆ ಸ್ಮಾರ್ಟ್ ಫೋನ್‌ ತರುವುದು ನಿಷೇಧಿಸಿದೆ ಎಂದು ಸೂಚಿಸಿದರು.

ಪರೀಕ್ಷಾ ಗೌಪ್ಯ ಕಾರ್ಯಗಳಿಗೆ ಬಳಸಲಾಗುವ ವಾಹನಗಳಿಗೆ ಪರೀಕ್ಷೆ ಮುಂಚಿತವಾಗಿ ಜಿಪಿಎಸ್‌ ಅಳವಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವಿದ್ಯಾರ್ಥಿಗಳು ಕಾಲೇಜಿನ ಪ್ರವೇಶ ಮತ್ತು ಪರೀಕ್ಷೆಯ ನಂತರ ಹೊರಬರುವಾಗ ಗುಂಪುಗೂಡದಂತೆ ಜಾಗೃತೆ ವಹಿಸಬೇಕು. ಪರೀಕ್ಷಾ ಸಿಬ್ಬಂದಿ ಸಹಿತ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ, ಜಿಲ್ಲಾ ಖಜಾನೆ ಅಧಿಕಾರಿ ಮಾಲಿಂಗರಾಯ ಬಿ, ಮತ್ತು ಕಾಲೇಜಿನ ಉಪನ್ಯಾಸಕರು, ಜಿಲ್ಲೆಯ ಶಿಕ್ಷಣಾಧಿಕಾರಿ, ತಹಶೀಲ್ದಾರರು, ಪೊಲೀಸ್ ಸಿಬ್ಬಂದಿ ಇದ್ದರು.

***

ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

- ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.