ADVERTISEMENT

ಹಿಂದೂ ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆ

ಕುಣಿದು ಕುಪ್ಪಳಿಸಿದ ಯುವಕ–ಯುವತಿಯರು, ಗಮನ ಸೆಳೆದ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 5:37 IST
Last Updated 22 ಸೆಪ್ಟೆಂಬರ್ 2022, 5:37 IST
ಯಾದಗಿರಿಯಲ್ಲಿ ಬುಧವಾರ ಜರುಗಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾದ ಯುವತಿ, ಯುವಕರು ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್
ಯಾದಗಿರಿಯಲ್ಲಿ ಬುಧವಾರ ಜರುಗಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾದ ಯುವತಿ, ಯುವಕರು ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್   

ಯಾದಗಿರಿ: ನಗರದ ಭವಾನಿ ಮಂದಿರದ ಹತ್ತಿರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಶೋಭಾಯಾತ್ರೆ ಬುಧವಾರ ಅದ್ಧೂರಿಯಾಗಿ ಜರುಗಿತು.

ಗಣೇಶ ಚತುರ್ಥಿಯಂದು ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. 21 ದಿನಗಳ ಕಾಲ ವಿಶೇಷ ಪೂಜೆ, ಅಲಂಕಾರ, ಮಹಾಪೂಜೆ, ಮಹಾಪ್ರಸಾದ ಸೇರಿದಂತೆ ವಿವಿಧ ದಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಗಮನಸೆಳೆದಿತ್ತು.

ಬುಧವಾರ ಬೆಳಗ್ಗೆಯಿಂದ ವಿಶೇಷ ಪೂಜೆ, ಅಲಂಕಾರ ಕಾರ್ಯಕ್ರಮ ನಡೆಯಿತು.ಸಂಜೆ ಶೋಭಾಯಾತ್ರೆ ಆರಂಭಗೊಂಡಿತು.

ADVERTISEMENT

ಶೋಭಾಯಾತ್ರೆ ಜರುಗುವ ಮಾರ್ಗದುದ್ದಕ್ಕೂ ಸ್ವತಂತ್ರ ಹೋರಾಟಗಾರರ ಫ್ಲೆಕ್ಸ್ ಅಳವಡಿಸಿದ್ದು, ಹನುಮ ವೇಷಧಾರಿಗಳ ಕುಣಿತ, ಭಗವಾ ಧ್ವಜವನ್ನು ವಿವಿಧ ವಿನ್ಯಾಸಗಳಲ್ಲಿ ಹಾರಾಡಿಸಿದ್ದು, ಮಹಾಗಣಪತಿ ಮೂರ್ತಿ ಕಾಣುವಂತೆ ದೀಪಾಲಂಕಾರ ಮಾಡಲಾಗಿತ್ತು.

ಭವಾನಿ ದೇವಸ್ಥಾನದ ಮಹಾಗಣಪತಿ ಮಂಟಪದಿಂದ ಹೊರಟ ಶೋಭಾಯಾತ್ರೆಯು ಡಿಡಿಪಿಐ ಕಚೇರಿ, ನೇತಾಜಿ ವೃತ್ತ, ಶಾಸ್ತ್ರೀ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಗಾಂಧಿ ವೃತ್ತಕ್ಕೆ ತಲುಪುತ್ತಿದ್ದಂತೆ ಶೋಭಾಯಾತ್ರೆಯ ವೀಕ್ಷಣೆಗೆ ಕಾದಿದ್ದ ಜನ ಕುಣಿಯಲು ಆರಂಭಿಸಿದರು. ನಂತರ ಚಕ್ಕರಕಟ್ಟಾ, ಮೈಲಾಪುರ ಅಗಸಿ ಮೂಲಕ ದೊಡ್ಡಕೆರೆಗೆ ಶೋಭಾಯಾತ್ರೆ ಮುಂದುವರೆಯಿತು.

ದೊಡ್ಡಕೆರೆಗೆ ತಲುಪುತ್ತಿದ್ದಂತೆ ಮಹಾಗಣಪತಿಗೆ ವಿಶೇಷ ಪೂಜೆ, ಮಂಗಳಾರತಿ ಸಲ್ಲಿಸಸಿದ ನಂತರ ವಿಸರ್ಜನೆ ಮಾಡಲಾಯಿತು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಹನುಮಾನದಾಸ ಮುಂದಡ, ಸಾಯಿಬಣ್ಣಾ ಚಂಡ್ರಿಕಿ ಸೇರಿದಂತೆ ಮುಖಂಡರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.