ಯಾದಗಿರಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಜೆಸ್ಕಾಂನ ವಿದ್ಯುತ್ ಮೀಟರ್ ರೀಡರ್‌ಗಳು ಮನೆ ಮನೆಗೆ ಜಿಯೊ ಟ್ಯಾಗಿಂಗ್ ಮಾಡುವ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಮೀಕ್ಷೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
‘ವಾಸದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದನ್ನು ಖಾತ್ರಿ ಪಡಿಸಿಕೊಂಡು, ಆರ್‌ಆರ್ ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಬೇಕು. ಅಲ್ಲಿರುವ ಜನರ ಸಮೀಕ್ಷೆ ಮಾಡಿ, ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗದಂತೆ ನಿಗಾವಹಿಸಬೇಕು. ಮೀಟರ್ ನಂಬರ್ ಇಲ್ಲದ ಅಲೆಮಾರಿ, ಅರೆ ಅಲೆಮಾರಿ ವಾಸಸ್ಥಳ ಮತ್ತು ಕೊಳಚೆ ಪ್ರದೇಶಗಳ, ಅರಣ್ಯ ಪ್ರದೇಶಗಳ ಪ್ರತಿ ಕುಟುಂಬದ ಸಂಖ್ಯೆ ಯುಎಚ್‌ಐಡಿ ಸೃಜಿಸಬೇಕು’ ಎಂದರು.
‘ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು. ನೋಡಲ್ ಅಧಿಕಾರಿಗಳು ಇದರ ಮೇಲುಸ್ತುವಾರಿ ವಹಿಸಬೇಕು. ಕಸ ವಿಲೇವಾರಿ ವಾಹನದ ಮೂಲಕ ಆಡಿಯೊ ಕ್ಲಿಪ್ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದ ಜವಾಬ್ದಾರಿಯನ್ನು ಆಯಾ ತಾ.ಪಂ ಇಒ, ಪಿಡಿಒಗಳಿಗೆ ಹಾಗೂ ನಗರ ಪ್ರದೇಶಗಳಲ್ಲಿ ಪಿಡಿಡಿಯುಡಿಸಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಸೂಚಿಸಿದರು.
‘ಸಮೀಕ್ಷೆದಾರರಿಗೆ, ಗಣತಿದಾರರಿಗೆ, ಶಿಕ್ಷಕರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡಬೇಕು. ಮಾಸ್ಟರ್ ತರಬೇತಿದಾರರು, ಗಣತಿದಾರರು, ಮೇಲ್ವಿಚಾರಕರ ಸಮಗ್ರ ಅಂಕಿ ಅಂಶಗಳನ್ನು ಇರಿಸಿಕೊಳ್ಳಬೇಕು. ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸದಸ್ಯರೂ ಸಿದ್ಧರಾಗಿರಬೇಕು. ಜಿಯೊ ಟ್ಯಾಗ್, ಸರ್ವೆ ಕಾರ್ಯವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.
‘ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಡಯಟ್, ಪದವಿಪೂರ್ವ ಕಾಲೇಜು, ಸಿಆಪಿ, ಬಿಆರ್‌ಪಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜೆಸ್ಕಾಂ, ಇಂಧನ ಇಲಾಖೆ ಅಧಿಕಾರಿಗಳು
ಪರಸ್ಪರ ಸಮನ್ವಯತೆಯೊಂದಿಗೆ ಈ ಕಾರ್ಯ ಯಶಸ್ವಿಗೊಳಿಸಬೇಕು’ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ನಾರಾಯಣಕರ, ವ್ಯವಸ್ಥಾಪಕ ಸಾಬಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
‘150 ಕುಟುಂಬಕ್ಕೆ ಒಬ್ಬ ಗಣತಿದಾರ’ ‘ಕುಟುಂಬಗಳ ಸಮೀಕ್ಷೆ 2024ಕ್ಕೆ ಅನ್ವಯಿಸುವಂತೆ ಜಿಲ್ಲೆಯಲ್ಲಿ 2.80 ಲಕ್ಷ ಕುಟುಂಬಗಳು ಇರುವ ಅಂದಾಜಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು. ‘ಇಂಧನ ಇಲಾಖೆ ಮೀಟರ್ ರೀಡರ್‌ಗಳು ಆರ್.ಆರ್ ನಂಬರ್ ಪ್ರಕಾರ ಜಿ.ಒ ಟ್ಯಾಗಿಂಗ್ ಸ್ಟಿಕರ್ ಅಂಟಿಸುವ ಕಾರ್ಯ ಆರಂಭಿಸಿದೆ. ಇದಾದ ನಂತರ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲು 150 ಕುಟುಂಬಕ್ಕೆ ಒಬ್ಬ ಗಣತಿದಾರರಂತೆ 2000ಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜನೆ ಮಾಡಲಾಗುವುದು. ಪ್ರತಿ 20 ಗಣತಿದಾರಿಗೆ ಒಬ್ಬರು ಮೇಲ್ವಿಚಾರಕರನ್ನು ಮತ್ತು ಜಿಲ್ಲೆಗೆ 50 ಮಾಸ್ಟರ್ ಟ್ರೈನರ್‌ಗಳನ್ನು ಗುರುತಿಸಿ ನಿಗದಿಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.