ADVERTISEMENT

ಶಹಾಪುರ: ಬಡ ಮಕ್ಕಳಿಗೆ ರಸ್ತಾಪುರ ಕಸ್ತೂರಿಬಾ ಗಾಂಧಿ ಹಾಸ್ಟೆಲ್ ಆಸರೆ

ಟಿ.ನಾಗೇಂದ್ರ
Published 11 ಡಿಸೆಂಬರ್ 2021, 19:31 IST
Last Updated 11 ಡಿಸೆಂಬರ್ 2021, 19:31 IST
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸ್ಥಾಪಿಸಿದ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿನಿಲಯದಲ್ಲಿ ಬೆಳಗಿನ ಉಪಹಾರ ಸೇವಿಸುತ್ತಿರುವ ವಿದ್ಯಾರ್ಥಿನಿಯರು
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸ್ಥಾಪಿಸಿದ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿನಿಲಯದಲ್ಲಿ ಬೆಳಗಿನ ಉಪಹಾರ ಸೇವಿಸುತ್ತಿರುವ ವಿದ್ಯಾರ್ಥಿನಿಯರು   

ಶಹಾಪುರ: ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದ ಕಟ್ಟಡದಲ್ಲಿ ಇರುವ ತಾಲ್ಲೂಕಿನ ಏಕೈಕ ಕರ್ನಾಟಕ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿನಿಲಯದಲ್ಲಿ ಅಚ್ಚುಕಟ್ಟಾದ ಉಪಹಾರ, ಊಟ ಹಾಗೂ ಉತ್ತಮ ಕಲಿಕೆಗೆ ಪೂರಕ ವಾತಾವರಣದಿಂದ ಹೆಚ್ಚು ಗಮನ ಸೆಳೆದಿದೆ.

ತಾಲ್ಲೂಕಿನ ನಿರ್ಗತಿಕ ಬಡ ಮಕ್ಕಳು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತಂದು ಶಿಕ್ಷಣ ನೀಡುವುದು. ಅಂಗವಿಕಲ ಮಕ್ಕಳು, ಪಾಲಕರು ಕೂಲಿಕೆಲಸಕ್ಕೆ ವಲಸೆ ಹೋಗಿದ್ದರೆ ಅಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ವಸತಿನಿಲಯವನ್ನು 2014ರಲ್ಲಿ ಸ್ಥಾಪಿಸಲಾಗಿದೆ ಎನ್ನುತ್ತಾರೆ ವಸತಿನಿಲಯದ ಮುಖ್ಯಸ್ಥ ಮಲ್ಲಣ್ಣಗೌಡ ಬಿರಾದಾರ.

ಯಾವುದೇ ಸ್ಪರ್ಧಾ ಪರೀಕ್ಷೆಯಿಲ್ಲದೆ ನೇರವಾಗಿ 6ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ತೆಗೆದುಕೊಳ್ಳಲಾಗುತ್ತದೆ. 6ರಿಂದ10ನೇಯ ತರಗತಿಯವರೆಗೆ ವಸತಿನಿಲಯದಲ್ಲಿ ಅಭ್ಯಾಸ ಮಾಡಲು ಅವಕಾಶವಿದ್ದು ಒಟ್ಟು 100 ವಿದ್ಯಾರ್ಥಿಗಳು ವಸತಿನಿಲಯದಲ್ಲಿ ಇದ್ದಾರೆ. 9 ಹಾಗೂ 10ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಮಕ್ಕಳು ವಸತಿಲಯದಲ್ಲಿ ಹೊಂದಿಕೊಂಡಿರುವ ಶಾಲೆಗೆ ತೆರಳುತ್ತಾರೆ. 6ರಿಂದ8ನೇ ತರಗತಿ ಅಭ್ಯಾಸ ಮಾಡುವ ಮಕ್ಕಳು ಗ್ರಾಮದಲ್ಲಿರುವ ಶಾಲೆಗೆ ಪ್ರವೇಶ ಪಡೆದಿದ್ದಾರೆ ಎಂದು ವಸತಿನಿಲಯದ ಮೇಲ್ವಿಚಾರಕಿ ಶಾರದ ರುಮಾಲ ತಿಳಿಸಿದರು.

ADVERTISEMENT

ವಸತಿನಿಲಯದಲ್ಲಿ ಎರಡು ಮಹಡಿ ಇವೆ. 12 ಕೋಣೆಗಳಿವೆ. ಶುದ್ಧ ಕುಡಿಯುವ ನೀರಿನ ಘಟಕ, ರುಚಿಕಟ್ಟಾದ ಊಟ, ಬೆಳಿಗ್ಗೆ ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಸೇರಿದಂತೆ ದಿನ ಒಂದಕ್ಕೆ ವಿವಿಧ ಬಗೆ ಉಪಹಾರ ನೀಡುತ್ತಾರೆ. ವಾರಕ್ಕೊಮ್ಮೆ ಮಾಂಸದೂಟ ಇರುತ್ತದೆ. ಅಗತ್ಯ ಸೌಕರ್ಯ ಇವೆ. ರಾತ್ರಿ ಕಾವಲುಗಾರ ಇದ್ದಾರೆ. ಯಾವುದೇ ಭಯವಿಲ್ಲ ಎನ್ನುತ್ತಾರೆ ವಸತಿನಿಲಯದ ವಿದ್ಯಾರ್ಥಿನಿಯರು.

ವಸತಿನಿಲಯದಲ್ಲಿ ರಾತ್ರಿ ವಿದ್ಯುತ್ ಹೋದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಂಚ ಬಂದಿಲ್ಲ ನೆಲವೆ ಆಸರೆಯಾಗಿದೆ. ರಾತ್ರಿ ವೈದ್ಯರು ಇರುವುದಿಲ್ಲ. ಸಮವಸ್ತ್ರ ಬಂದಿಲ್ಲ. ಶುಚಿ ಪ್ಯಾಡ್ ಕೊಟ್ಟಿಲ್ಲ. ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂಬುವುದು ಮಕ್ಕಳ ಬೇಡಿಕೆಯ ಪಟ್ಟಿಯಾಗಿದೆ.

*
ವಸತಿನಿಯದಲ್ಲಿ ತಾಲ್ಲೂಕಿನ ಬಡ ವಿದ್ಯಾರ್ಥಿನಿಯರಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ತೆಗೆದುಕೊಳ್ಳಲಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಊಟ ಹಾಗೂ ಶಿಕ್ಷಣ ನೀಡಲಾಗುತ್ತಿದೆ.
- ಮಲ್ಲಣ್ಣಗೌಡ ಬಿರಾದಾರ, ವಸತಿನಿಲಯದ ಮುಖ್ಯಸ್ಥ

*
ವಸತಿನಿಲಯದಲ್ಲಿ ಮೇಲ್ವಿಚಾರಕಿಯಾಗಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವೆ. ಕೋವಿಡ್ ಕಾರಣದಿಂದ 16 ತಿಂಗಳಿಂದ ಸಂಬಳ ಬಂದಿಲ್ಲ. ತುಂಬಾ ತೊಂದರೆಯಾಗಿದೆ.
- ಶಾರದ ರುಮಾಲ, ವಸತಿನಿಲಯದ ಮೇಲ್ವಿಚಾರಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.