ADVERTISEMENT

ಹುಣಸಗಿ | ಶಾಲಾ ಮುಖ್ಯಶಿಕ್ಷಕರ ಜೇಬಿಗೆ ‘ಮೊಟ್ಟೆ ಬಾರ’

ಹುಣಸಗಿ ತಾಲ್ಲೂಕು 190ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:32 IST
Last Updated 19 ಡಿಸೆಂಬರ್ 2025, 6:32 IST
ಕೋಳಿ ಮೊಟ್ಟೆ
ಕೋಳಿ ಮೊಟ್ಟೆ   

ಹುಣಸಗಿ: ತಾಲ್ಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳಿಗೆ ಕಳೆದ ಮೂರು, ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಮಕ್ಕಳಿಗೆ ಮೊಟ್ಟೆ ಸಾದಿಲ್ವಾರು ಹಣ ಜಮೆಯಾಗಿಲ್ಲ. ಇದರಿಂದ ಬಹುತೇಕ ಶಾಲೆಯ ಮುಖ್ಯಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕಿನಲ್ಲಿ 190ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿವೆ. ಇಲ್ಲಿ 400ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ಈ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆಗಾಗಿ ಸರ್ಕಾರದ ಯೊಜನೆಯಿಂದ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡುತ್ತ ಬಂದಿದೆ.

ಕಳೆದ ಮೂರು ತಿಂಗಳಿಂದ ಶಿಕ್ಷಕರು ತಮ್ಮದೇ ಮೂಲದಿಂದ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದಾರೆ. ಆದರೆ ಅದನ್ನು ಖರೀದಿಸಲು ಹಣವೇ ಬಂದಿಲ್ಲ. ಇದರಿಂದಾಗಿ ಸಾಕಷ್ಟು ಜನ ಮುಖ್ಯಶಿಕ್ಷಕರು ತಮ್ಮ ವೇತನದಲ್ಲಿಯೇ ಹಣವನ್ನು ಖರ್ಚು ಮಾಡುತ್ತಿದ್ದರೇ, ಇನ್ನೂ ಕೆಲವರು ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದಾಗಿದೆ ಎಂದು ಕೆಲವರು ನೊಂದು ನುಡಿದರು.

ADVERTISEMENT

ಈ ಹಿಂದೆ ಶಿಕ್ಷಕರು ಪಾಠ ಬೊಧನೆಗೆ ಆದ್ಯತೆ ನೀಡುತ್ತಿದ್ದರು. ಆದರೆ ಈಗ ಬಿಸಿಊಟ ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದರು.

ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಪಾಲ್ಗೊಳ್ಳುವಂತಾಗಲು ಹಾಗೂ ಪೌಷ್ಟಿಕಾಂಶಯುಕ್ತ ಆಹಾರಕ್ಕಾಗಿ ಅಜಿಂ ಪ್ರೇಮಜೀ ಫೌಂಡೇಷನ್‌ನಿಂದ ವಾರದಲ್ಲಿ ನಾಲ್ಕು ದಿನ ಹಾಗೂ ರಾಜ್ಯ ಸರ್ಕಾರದಿಂದ ವಾರದಲ್ಲಿ ಎರಡು ದಿನ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತಿದೆ. ಪ್ರತಿ ಒಂದು ಮಗುವಿಗೆ ತಿಂಗಳಿಗೆ ಅಂದಾಜು ₹168 ಖರ್ಚು ಮಾಡಲಾಗುತ್ತಿದೆ. ಆದರೆ ನಿಯಮದಂತೆ ಸಮಯಕ್ಕೆ ಬರುತ್ತಿಲ್ಲ ಎನ್ನುವ ಆರೋಪಗಳು ಬಲವಾಗಿವೆ.

ಹಲವಾರು ಬಾರಿ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ಮುಂಗಡವಾಗಿ ಜಮೆಯಾಗುತ್ತದೆ ಎಂಬ ಮಾಹಿತಿ ಕೂಡಾ ಇದೆ. ಆದರೆ ಸಾದಿಲ್ವಾರು ಹಣ ಏಕೆ ಜಮಾ ಮಾಡುತ್ತಿಲ್ಲ ತಿಳಿಯದಂತಾಗಿದೆ ಎಂದು ಶಿಕ್ಷಕರ ಸಂಘದ ಸದಸ್ಯರು ಹೇಳಿದರು.

‘ಪ್ರತಿ ಶಾಲೆಗಳಿಗೂ ಬಿಸಿ ಊಟ ತಯಾರಿಕೆಗೆ ಅಂದಾಜು 4 ಗ್ಯಾಸ್‌ ಬೇಕಾಗುತ್ತದೆ. ಆದರೆ ಕೊಡೇಕಲ್ಲ ವಲಯದಲ್ಲಿನ ಶಿಕ್ಷಕರು ತಾವೇ ಖುದ್ದಾಗಿ ಗ್ಯಾಸ್‌ ಎಜನ್ಸಿಗೆ ತೆರಳಿಗೆ ತಮ್ಮದೇ ವಾಹನದಲ್ಲಿ ಗ್ಯಾಸ್‌ ಶಾಲೆಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಜಿಮಲಂಗ ಬಿಜಲಿ.

‘ಜಂಗಿನಗಡ್ಡಿ, ಮೇಲಿಮನಗಡ್ಡಿ, ನಾರಾಯಣಪುರ, ಸೇರಿದಂತೆ ಇತರ ಗ್ರಾಮಗಳ ಶಾಲೆಗಳ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗಲಿ’ ಎನ್ನುತ್ತಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಹನಸನ ಚೌದ್ರಿ ಬ್ಯಾಲದಗಿಡದ ತಾಂಡಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.