ADVERTISEMENT

‘ಮೀನುಗಾರರಿಗೆ ಸೌಲಭ್ಯ ಒದಗಿಸಿ’

ವಿವಿಧ ಬೇಡಿಕೆ ಈಡೇರಿಕೆಗೆ ಅಂಗಾರ ಅವರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:12 IST
Last Updated 21 ಏಪ್ರಿಲ್ 2022, 7:12 IST
ಯಾದಗಿರಿಯಲ್ಲಿ ಮೀನುಗಾರಿಕೆ ಸಹಕಾರ ಸಂಘದ ಪದಾಧಿಕಾರಿಗಳು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಯಾದಗಿರಿಯಲ್ಲಿ ಮೀನುಗಾರಿಕೆ ಸಹಕಾರ ಸಂಘದ ಪದಾಧಿಕಾರಿಗಳು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಯಾದಗಿರಿ: ಸಿಸಿ ರಸ್ತೆ, ವಿದ್ಯುತ್ ದೀಪ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೀನುಗಾರಿಕೆ ಸಹಕಾರ ಸಂಘ ಮುಖಂಡರು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್. ಅಂಗಾರ ಅವರಿಗೆ ಮನವಿ ಸಲ್ಲಿಸಿದರು.

ಮುಖ್ಯ ರಸ್ತೆಯಿಂದ ನೂತನ ಮಾರುಕಟ್ಟೆಗೆ ಮೀನು ಹೋಗುವ ದಾರಿ ಕಪ್ಪು ಮಣ್ಣಿನಿಂದ ಕೂಡಿದ್ದು, ಕೂಡಲೇ ಆದ್ಯತೆ ಮೇರೆಗೆ ಸಿಸಿ ರಸ್ತೆ ನಿರ್ಮಿಸಬೇಕು. ರಸ್ತೆ ಎಡಬಲ ಭಾಗಕ್ಕೆ ವಿದ್ಯುತ್ ಕಂಬ ಹಾಕಿ ದೀಪ ಅಳವಡಿಸಿ ಸಸಿಗಳು ನೆಡಬೇಕು. ಮೀನು ಮಾರಾಟ ಮಳಿಗೆಗೆ ಆವರಣ ನಿರ್ಮಿಸಿ ಆವರಣದಲ್ಲಿ ಸಸಿಗಳನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕೋಲಿ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಯಾದಗಿರಿಯ ದುರ್ಗಾದೇವಿ ಬೋವಿರಾಜ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಹಾಪುರ ತಾಲ್ಲೂಕಿನ ಮರಂಕಲ್ ಪ್ರಾಥಮಿಕ ಮೀನುಗಾರಿಕೆ ಸಹಕಾರ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಮುಖಂಡರು, ಯಾದಗಿರಿ ಜಿಲ್ಲಾ ಕೇಂದ್ರವಾಗಿ 12 ವರ್ಷವಾಯಿತು. ಆದರೂ ಮೀನುಗಾರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜಿಲೆಯಲ್ಲಿ ಕೆರೆಗಳು ಹೊಂದಿದ್ದು, ಭೀಮಾ ಮತ್ತು ಕೃಷ್ಣ ನದಿಗಳಿವೆ. ಆದರೆ, ಸೌಲತ್ತು ಒದಗಿಸುವ ಚಿಂತನೆ ಆಗಿಲ್ಲ. ಮೀನುಗಾರರಿಗೆ ಮೀನು ಹಿಡಿದು ಮಾರಾಟ ಮಾಡಿ ಉಪಜೀವನ ಮಾಡುವುದೇ ಇವರ ಕುಲಕಸುಬು ಆಗಿದೆ ಎಂದರು.

ಮೀನುಗಾರರ ಮನೆಗಳಿಗೆ ನಿಗದಿಪಡಿಸಿದ ನೆರವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು.

ಮೀನುಗಾರರ ಬಲೆಗಳು ಈ ಹಿಂದೆ 10 ಕೆ.ಜಿ.ವಿತರಣೆ ಮಾಡುತ್ತಿದ್ದರೂ ಇದನ್ನು 30 ಕೆ.ಜಿ.ಗೆ ಹೆಚ್ಚಿಸಬೇಕು. ಮೀನುಗಾರರಿಗೆ ದ್ವಿಚಕ್ರ ವಾಹನ ಖರೀದಿಗೆ ಶೇ 70ರಷ್ಟು ಸಹಾಯಧನ ಹೆಚ್ಚಿಸಬೇಕು. ಮೀನು ಕೃಷಿಕಾರರಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲ ಸೌಲಭ್ಯವನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಬೇಕು. ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಲಘು ವಾಹನ ವಿತರಣೆ ಮಾಡಬೇಕು ಎಂಡರು.

ಕೋಲಿ ಸಮಾಜದ ಮುಖಂಡ ಉಮೇಶ್ ಮುದ್ನಾಳ, ನಿಂಗಪ್ಪ, ದುರ್ಗಪ್ಪ ಎಸ್, ಮಲ್ಲಪ್ಪ ಬಂಗಿ, ದೇವಿಂದ್ರ ಪೂಜಾರಿ, ಮಲ್ಲಪ್ಪ, ಮಲ್ಲಿಕಾರ್ಜುನ ಎಸ್., ಮಾನಪ್ಪ, ಶಿವರಾಮ್, ಮರಿಯಪ್ಪ, ಪರಶು ರಾಮ್, ಅಂಜಪ್ಪ, ಗಾಳಪ್ಪ, ಮಾರುತಿ, ಸಾಯಿಬಣ್ಣ, ಕಣ್ಣಪ್ಪ, ಹುಚ್ಚಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.