ADVERTISEMENT

ಶಹಾಪುರ: ಅಂಬೇಡ್ಕರ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:44 IST
Last Updated 10 ಮಾರ್ಚ್ 2025, 15:44 IST
ಶಹಾಪುರ ನಗರದ ಹಳೆ ಬಸ್ ನಿಲ್ದಾಣ ಬಳಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಶಹಾಪುರ ನಗರದ ಹಳೆ ಬಸ್ ನಿಲ್ದಾಣ ಬಳಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಶಹಾಪುರ: ನಗರದ ಸರ್ಕಾರಿ ಜಾಗದಲ್ಲಿ ಡಾ.ಅಂಬೇಡ್ಕರ್‌ ಪುತ್ಥಳಿ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲು ಸಚಿವ ಎಚ್.ಸಿ ಮಹದೇವಪ್ಪ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಅಲ್ಲದೇ ಪಕ್ಷಭೇದ ಮರೆತು ಶೋಷಿತ ಸಮುದಾಯದವರು ನಡೆಸಿದ ಸಾಂಘಿಕ ಹೋರಾಟ ಫಲ ಸಿಕ್ಕಿದೆ. ಸಾಧ್ಯವಾದಷ್ಟು ತ್ವರಿತವಾಗಿ ಪುತ್ಥಳಿ ಸ್ಥಾಪನೆಗೆ ಎಲ್ಲರೂ ಚರ್ಚಿಸಿ ತಿರ್ಮಾನಕ್ಕೆ ಬರೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಹಳೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆಗೆ ಸೋಮವಾರ ಭೂಮಿಪೂಜೆ ನೆರವೆರಿಸಿ ಅವರು ಮಾತನಾಡಿದರು.

198.35 ಚ.ಮೀ ಜಾಗದಲ್ಲಿ ಪುತ್ಥಳಿ ಹಾಗೂ ಉದ್ಯಾನ ನಿರ್ಮಿಸಲಾಗುವುದು. ಪೀಠ ಸ್ಥಾಪನೆ ಮಾಡಿದರೆ ಸಾಲದು ಅದರ ಸ್ವಚ್ಛತೆ ಹಾಗೂ ನಿರ್ವಹಣೆ ಮಾಡುವುದು ಅಷ್ಟೆ ಮುಖ್ಯವಾಗಿದೆ. ಅದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅಂಬೇಡ್ಕರ ಪುತ್ಥಳಿ ಸ್ಥಾಪನೆಗೆ ಯಾರ ವಿರೋಧವಿಲ್ಲ. ಆದರೆ ಅಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿಯಮದ ಪ್ರಕಾರ ನಿರ್ಮಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಪುತ್ಥಳಿ ಸ್ಥಾಪನೆಗೆ ಎಲ್ಲಾ ಸಮುದಾಯದವರನ್ನು ಒಳಗೊಂಡು ಹೋರಾಟ ಮಾಡಿರುವುದು ಉತ್ತಮ ಕೆಲಸವಾಗಿದೆ. ಅದರಂತೆ ಎಲ್ಲಾ ಸಮುದಾಯದವರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

ADVERTISEMENT

ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಎಲ್ಲಾ ಸಮಾಜದರು ಕೂಡಿ ಹೋರಾಟ ಮಾಡಿದ್ದು ಫಲಿಸಿದೆ. ಸುಲಭವಾಗಿ ಸರ್ಕಾರಕ್ಕೆ ಮನವಿ ಮಾಡಿದರೆ ಸ್ಥಳ ಸಿಗುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆಯಂತೆ ಹಕ್ಕು ಸಿಗದಿದ್ದಾಗ ನಮ್ಮ ಹಕ್ಕನ್ನು ಕಸಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಎಲ್ಲಾ ಸಮಾಜದ ಪ್ರತಿಯೊಬ್ಬರು ಬೆನ್ನಲುಬಾಗಿ ನಿಂತು ಹೋರಾಟ ನಡೆಸಿದರ ಫಲ ಇದಾಗಿದೆ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣಪ್ಪ ಸಲಾದಪುರ, ಆರ್.ಚೆನ್ನಬಸ್ಸು ವನದುರ್ಗ ಹಾಗೂ ಕರವೇ ಮುಖಂಡ ಶರಣು ಗದ್ದುಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೆತ್ತೆಪಾಲ ಭಂತೇಜಿ, ಸಿದ್ದಲಿಂಗಪ್ಪ ಆನೇಗುಂದಿ, ಶ್ರೀಶೈಲ್ ಹೊಸಮನಿ, ನೀಲಕಂಠ ಬಡಿಗೇರ, ದೇವಿಂದ್ರಪ್ಪಗೌಡ ಗೌಡಗೇರಿ, ಭೀಮಣ್ಣ ಮೇಟಿ, ಇಬ್ರಾಹಿಂ ಶಿರವಾಳ, ಗೌಡಪ್ಪಗೌಡ ಆಲ್ದಾಳ, ಗಿರೆಪ್ಪಗೌಡ ಬಾಣತಿಹಾಳ, ಗುಂಡಪ್ಪ ತುಂಬಗಿ, ಅಯ್ಯಣ್ಣ ಕನ್ಯಾಕೊಳ್ಳುರ, ಭೀಮರಾಯ ಹೊಸಮನಿ, ಮಲ್ಲಪ್ಪ ಗೋಗಿ, ಹೊನ್ನಪ್ಪ ಗಂಗನಾಳ, ಸುಭಾಸ ತಳವಾರ, ಶಿವಪುತ್ರ ಜವಳಿ, ನಾಗಣ್ಣ ಬಡಿಗೇರ, ಮುಸ್ತಫ ದರ್ಬಾನ್, ಮರೆಪ್ಪ ಪ್ಯಾಟಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಮಾನಸಿಂಗ್ ಚವ್ಹಾಣ, ಈರಣ್ಣಗೌಡ ಮಲ್ಲಬಾದಿ, ಶಾಂತಪ್ಪ ಗುತ್ತೇದಾರ, ಶಂಕರ್ ಸಿಂಗೆ, ಸೈಯದ್ದುದ್ದೀನ್ ಖಾದ್ರಿ, ಅಪ್ಪಣ್ಣ ದಶವಂತ, ಶಿವಕುಮಾರ ತಳವಾರ, ಭೀಮರಾ ಜುನ್ನಾ ಭೀಮರಾಯ ಶರಣು ದೋರನಹಳ್ಳಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪಡೆದ ‘ಪ್ರಜಾವಾಣಿ’ ಪತ್ರಿಕೆ ವರದಿಗಾರ ಟಿ.ನಾಗೇಂದ್ರ ಅವರನ್ನು ಸಚಿವರು ಹಾಗೂ ವಿವಿಧ ಸಮಾಜದ ಮುಖಂಡರು ಸನ್ಮಾನಿಸಿದರು.

ಸ್ಥಿತಿವಂತರು ನಾಲ್ಕಾರು ಮೀಸಲಾತಿಯನ್ನು ಪಡೆಯುವುದು ನಿಲ್ಲಿಸಬೇಕು. ಅಸಹಾಯಕರಿಗೆ ತಲುಪಿಸುವ ಕೆಲಸವಾಗಲಿ.ಪುತ್ಥಳಿಯ ಪೀಠ ಸ್ಥಾಪನೆಗಾಗಿ ನಗರಸಭೆ ಅನುದಾನದಲ್ಲಿ ₹ 10 ಲಕ್ಷ ತಕ್ಷಣ ಬಿಡುಗಡೆ ಮಾಡಲಾಗುವುದು
ಶರಣಬಸಪ್ಪ ದರ್ಶನಾಪುರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.