ADVERTISEMENT

ಶಹಾಪುರ: ನೆಲಕಚ್ಚಿದ ಶೇಂಗಾ ಧಾರಣೆ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:07 IST
Last Updated 18 ಏಪ್ರಿಲ್ 2022, 5:07 IST
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಶೇಂಗಾ ರಾಶಿ ಮಾಡಿರುವುದು
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಶೇಂಗಾ ರಾಶಿ ಮಾಡಿರುವುದು   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ಹಾಗೂ ನೀರು ಆಶ್ರಿತ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಫಸಲು ಕೈಗೆ ಬಂದಿದೆ. ಧಾರಣೆ ಮಾತ್ರ ನೆಲಕಚ್ಚಿದೆ.

‘ಪ್ರತಿ ಕ್ವಿಂಟಲ್‌ಗೆ ₹4 ರಿಂದ 5 ಸಾವಿರ ಬೆಲೆ ಇದೆ. ಬಿತ್ತನೆಗಾಗಿ ಮಾಡಿದ ಖರ್ಚು ಸಹ ಸಿಗುತ್ತಿಲ್ಲ. ಶ್ರಮ ವ್ಯರ್ಥವಾಗಿದೆ. ಶೇಂಗಾ ಬೆಳೆಗಾರರು ಕಂಗಾಲಾಗಿದ್ದೇವೆ’ ಎಂದು ರೈತರು ತಿಳಿಸುತ್ತಾರೆ.

‘ಒಂದು ಜಿಲ್ಲೆಗೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಎಣ್ಣೆಕಾಳು ನಿಗಮ ಯಾದಗಿರಿ ಜಿಲ್ಲೆಯಿಂದ ಶೇಂಗಾ ಬೆಳೆಯನ್ನು ಆಯ್ಕೆ ಮಾಡಿದೆ. ಆದರೆ ಸರ್ಕಾರದ ಯೋಜನೆ ನೆಚ್ಚಿಕೊಂಡು ಬಿತ್ತನೆ ಮಾಡಿದ ರೈತರು ಈಗ ಕೈ ಕೈ ಹಿಸಿಕಿಕೊಳ್ಳುವಂತಾಗಿದೆ. ರೈತರ ಅಳಲಿಗೆ ಜಿಲ್ಲಾಡಳಿತ ಕಿವಿಯಾಗುತ್ತಿಲ್ಲ. ಶೇಂಗಾ ಎಣ್ಣೆ ಪ್ರತಿ ಕೆ.ಜಿಗೆ ₹180 ಇದೆ’ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶೇಂಗಾ 120 ದಿನದ ಬೆಳೆಯಾಗಿದೆ. ಬೇಸಿಗೆ ಹಂಗಾಮಿನಲ್ಲಿ ಕಾಲುವೆ ನೀರಿನ ಅಭಾವದ ಕಾರಣ ಕಡಿಮೆ ನೀರು ಬೇಕಾಗುವ ಶೇಂಗಾ ಬೆಳೆಯನ್ನು ನೆಚ್ಚಿಕೊಂಡೆವು. ಒಂದು ಕ್ವಿಂಟಲ್‌ಗೆ ₹11 ಸಾವಿರ ನೀಡಿ ಶೇಂಗಾ ಕಾಳು ಖರೀದಿಸಿ ಬಿತ್ತನೆ ಮಾಡಿದ್ದೇವೆ. ಎಕರೆಗೆ ₹11 ಸಾವಿರ ವೆಚ್ಚ ಮಾಡಿದ್ದೇವೆ. ಎಕರೆಗೆ 3 ರಿಂದ 4 ಕ್ವಿಂಟಲ್ಇಳುವರಿ ಬಂದಿದೆ. ಧಾರಣೆಯು ಪ್ರತಿ ಕ್ವಿಂಟಲ್‌ಗೆ ₹4 ರಿಂದ 5 ಸಾವಿರ ಇದೆ. ದಿಕ್ಕು ತೋಚುತ್ತಿಲ್ಲ. ಕಳೆದ ವರ್ಷ ಉತ್ತಮ ಇಳುವರಿ ಬಂದಿತ್ತು. ಜತೆಗೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ಇತ್ತು. ಇಷ್ಟೊಂದು ಕಡಿಮೆ ಬೆಲೆ ಎಂದಿಗೂ ಆಗಿರಲಿಲ್ಲ. ಕೂಲಿ ಹಣವನ್ನು ಹೇಗೆ ನೀಡಬೇಕು ಎಂಬ ಆತಂಕ ಶುರುವಾಗಿದೆ’ ಎನ್ನುತ್ತಾರೆ ರೈತ ಶಿವಪ್ಪ.

ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶ ಮಾಡಿ ಶೇಂಗಾಕ್ಕೆ ಬೆಂಬಲ ಬೆಲೆ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಶೇಂಗಾ ಬೆಳೆಗಾರರು ಮನವಿ ಮಾಡಿದ್ದಾರೆ.ಆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.