
ಗುರುಮಠಕಲ್: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಂಗವಿಕಲ, ವಿಧವಾ ಮತ್ತು ಸಂಧ್ಯಾಸುರಕ್ಷಾ ಪಿಂಚಣಿಗಳಿಗೆ ಅರ್ಹರಿರುವ ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮವಹಿಸಿ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಲಾಲಪ್ಪ ತಲಾರಿ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಪತ್ರ ನೀಡಿ ಅವರು ಮಾತನಾಡಿದರು.
‘ನಿಯಮಾನುಸಾರ 60 ವರ್ಷ ಮೇಲ್ಪಟ್ಟ ಹಲವು ಅರ್ಹ ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ಸಿಕ್ಕಿಲ್ಲ, ಅಂಗವಿಕಲರ ಹಾಗೂ ವಿಧವಾ ವೇತನಕ್ಕೆ ನಿಜವಾಗಿ ಅರ್ಹರಿದ್ದರೂ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಯೋ ಸಹಜ ಅನಾರೋಗ್ಯ, ಮಾಹಿತಿಯ ಕೊರತೆ, ಅನಕ್ಷರತೆ ಸೇರಿದಂತೆ ಹಲವು ಕಾರಣಗಳಿಂದ ಅರ್ಹರಿದ್ದರೂ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ಬರಲು ಸಾಧ್ಯವಾಗದ ಕಾರಣ ಸೌಲಭ್ಯ ವಂಚಿತರಾಗಿದ್ದಾರೆ’ ಎಂದು ಸಮಸ್ಯೆಗಳನ್ನು ವಿವರಿಸಿದರು.
ಹೀಗಾಗಿ ಕಂದಾಯ ಸಿಬ್ಬಂದಿ ಮತ್ತು ಸಂಬಂಧಿತ ಅಧಿಕಾರಿಗಳನ್ನು ಆಯಾ ಬಡಾವಣೆಗಳಿಗೆ ತೆರಳಿ ಅರ್ಹರಿಂದ ಅರ್ಜಿಗಳನ್ನು ಪಡೆಯುವ ಮೂಲಕ ಸಮಸ್ಯೆಯಲ್ಲಿದ್ದವರ ಜೀವನಕ್ಕೆ ‘ಹೊಸ ಚಿಗುರಿ’ನ ಭರವಸೆ ಮೂಡಿಸಿ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿದ ಆತ್ಮತೃಪ್ತಿಯೂ ಸಿಗಲಿದೆ’ ಎಂದು ಕೋರಿದರು.
ಕೃಷ್ಣ ದಾಸರಿ, ಆಕಾಶ ಬ್ಯಾಗರಿ, ರಾಮಕೃಷ್ಣ ಸೈದಪೋಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.