ADVERTISEMENT

ಸಚಿವರು ಬಂದರೆ ಜಿಲ್ಲೆಯ ಸಮಸ್ಯೆ ತೋರಿಸುವೆ: ಶಾಸಕ ಶರಣಗೌಡ ಕದಕೂರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:37 IST
Last Updated 12 ಡಿಸೆಂಬರ್ 2025, 7:37 IST
ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಗುರುಠಕಲ್ ಶಾಸಕ ಶರಣಗೌಡ ಕಂದಕೂರ ಪಡಿತರ ವಿತರಣೆ ಕುರಿತು ಗಮನ ಸೆಳೆದರು.
ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಗುರುಠಕಲ್ ಶಾಸಕ ಶರಣಗೌಡ ಕಂದಕೂರ ಪಡಿತರ ವಿತರಣೆ ಕುರಿತು ಗಮನ ಸೆಳೆದರು.   

ಗುರುಮಠಕಲ್: ‘ಸಚಿವರು ಈವರೆಗೂ ನಮ್ಮ ಜಿಲ್ಲೆಗೆ ಬಂದಿಲ್ಲ. ಒಂದೆರಡು ದಿನ ನಮ್ಮ ಜಿಲ್ಲೆಗೆ ಬನ್ನಿ. ನಮ್ಮ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ತೋರಿಸುವೆ’ ಎಂದು ಶಾಸಕ ಶರಣಗೌಡ ಕಂದಕೂರ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಆಗ್ರಹಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ‘ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಪಡಿತರ ವಿತರಣೆಗೆ ಮತ್ತು ಸಾರ್ವಜನಿಕ ವಿತರಣೆಗೆ(ಪಿಡಿಎಸ್) ಸಂಬಂಧಿಸಿದಂತೆ ತಾವು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಸಚಿವರು ಜಿಲ್ಲೆಗೆ ಬಂದರೆ ಸತ್ಯವನ್ನು ತೋರಿಸುವುದಾಗಿ’ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ 55 ತಾಂಡಾಗಳಿದ್ದು, ಕೇವಲ 22ಕ್ಕೆ ವಿತರಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಚಿತ ಅಕ್ಕಿ ವಿತರಿಸುತ್ತಿದ್ದು, ಅದನ್ನು ಪಡೆಯಲು 5 ಕಿ.ಮೀ ಹೋಗಬೇಕಿದೆ. ಕೆಲವೊಮ್ಮೆ ಬಯೋಮೆಟ್ರಿಕ್ ಸಮಸ್ಯೆಯಾದರೆ ಕೆಲವೊಮ್ಮೆ ವಿತರಕ ಸಿಗುವುದಿಲ್ಲ. ಸಮಸ್ಯೆಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಹಾರ ಕೊಡಲಾಉತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪಡಿತರ ವಿತರಣೆಗೆ ಸಂಬಂಧಿತ ಸರ್ಕಾರದ ನಿಯಮ ಪಾಲನೆಯಿಲ್ಲ. ಉಪಕೇಂದ್ರ, ಅಂಗಡಿ ಸ್ಥಾಪಿಸಿಲ್ಲ. ಈವರೆಗೂ ವಿತರಕರೂ ಸಹ ತಾಂಡಾಗಳಿಗೆ ತೆರಳಿ ಪಡಿತರ ವಿತರಣೆ ಮಾಡುತ್ತಿಲ್ಲ. ನಿಯಮ ಪಾಲಿಸದ ವಿತರಕರ ಮೇಲೆ ಕ್ರಮವಹಿಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಕಂದಕೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ‘3 ಕಿ.ಮೀ. ಅಥವಾ ಅದಕ್ಕಿಂತಲೂ ದೂರದಲ್ಲಿರುವ ಗ್ರಾಮಗಳಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ತಾಂಡಾಗಳಲ್ಲಿ ಪಡಿತರ ಅಂಗಡಿ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶೇ 40 ಜನಸಂಖ್ಯೆಯಿರುವಲ್ಲಿ ಹೊಸ ಅಂಗಡಿ ಮಂಜೂರು ಮಾಡಲಾಗುವುದು ಮತ್ತು 70 ವರ್ಷಕ್ಕೂ ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆಯಡಿ ಮನೆಗೆ ಪಡಿತರ ವಿತರಿಸಲಾಗುವುದು’ ಎಂದು ತಿಳಿಸಿದರು.

ತಮ್ಮ ಪ್ರಶ್ನೆಗೆ ಉತ್ತರ ನೀಡಿದ ವೇಳೆ ಪತ್ರದಲ್ಲಿ ‘ವಿಧಾನ ಪರಿಷತ್ ಸದಸ್ಯ’ ಎಂದು ತಪ್ಪಾಗಿ ನಮೂದಿಸಿದ್ದರ ಕುರಿತು ಸಭಾಪತಿ ಯು.ಟಿ.ಖಾದರ್ ಅವರಲ್ಲಿ ಶಾಸಕ ಶರಣಗೌಡ ಕಂದಕೂರ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.