ಗುರುಮಠಕಲ್: ‘ಉತ್ತಮ ಬೆಳೆಗೆ ಜಮೀನಿನಲ್ಲಿನ ಮಣ್ಣಿನ ಆರೋಗ್ಯ ಮುಖ್ಯ. ಮಣ್ಣಿನ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕು’ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಸಲಹೆ ನೀಡಿದರು.
ಪಟ್ಟಣದ ರೈತ ಸಂಪರ್ಕ ಕಚೇರಿ (ಎಪಿಎಂಸಿ ಆವರಣ)ಯಲ್ಲಿ ಗುರುವಾರ ರೈತರಿಗೆ ರಸಗೊಬ್ಬರಗಳಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ (ಕಾಂಪ್ಲೆಕ್ಸ್) ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಆರೋಗ್ಯದ ಕುರಿತು ಪರೀಕ್ಷಿಸಿ, ಅದಕ್ಕೆ ಅವಶ್ಯಕ ಪೋಷಕಾಂಶಗಳ ಪೂರೈಕೆಯಿಂದ ಇಳುವರಿ ಹೆಚ್ಚಿತ್ತದೆ ಎಂದರು.
ಬೆಳೆಗಳಿಗೆ ಗಾಳಿ ಮತ್ತು ನೀರಿನ ಮೂಲಕ ಇಂಗಾಲ, ಜಲಜನಕ, ಆಮ್ಲಜನಕ ಪ್ರಾಕೃತಿಕವಾಗಿ ಸಿಗಲಿವೆ. ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್ ಹಾಗೂ ಲಘು ಪೋಷಕಾಂಶಗಳಾದ ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಗಂಧಕ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬ್ಬನಂ, ಕ್ಲೋರಿನ್ ಮತ್ತು ನಿಕಲ್ ಸೇರಿ 17 ಬಗೆಯ ಪೋಷಕಾಂಶಗಳು ಅಗತ್ಯ ಎಂದರು.
ಲಘು ಮತ್ತು ಪ್ರಧಾನ ಪೋಷಕಾಂಶಗಳು ಮಣ್ಣಿನಿಂದ ಅಗತ್ಯ ಪ್ರಮಾಣದಲ್ಲಿ ಲಭ್ಯವಾಗದ ಕಾರಣ ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರು ಎಲೆಗಳಿಂದ ಮತ್ತು ರಸಗೊಬ್ಬರಗಳಿಂದ ಒದಗಿಸಬಹುದು. ಆದರೆ, ಕೇವಲ ಡಿಎಪಿ ಮತ್ತು ಯೂರಿಯಾದಿಂದ ಮಣ್ಣಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗುವುದಿಲ್ಲ. ಆದ್ದರಿಂದ ಅಗತ್ಯಕನ್ನುಗುಣವಾಗಿ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವುದು ಉತ್ತಮ ಎಂದು ವಿವರಿಸಿದರು.
ಶಿಫಾರಸಿನಂತೆ 20:20:13, 15:15:15, 10:26:26, 12:32:16, 22:22:14, 14:35:14, 17:17:17, 14:28:14, 19:19:19, 20:10:10 ಬಳಸುವ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಜತೆಗೆ ಹತ್ತಿ, ಭತ್ತದ ಕಟಾವು ಮತ್ತು ಇತರೆ ಬೆಳೆಗಳ ರಾಶಿ ನಂತರ ಕಸವನ್ನು ಸುಡುವ ಬದಲು ಬಣ್ಣಿನಲ್ಲಿ ಕೊಳೆಸಿದರೆ ಮಣ್ಣಿನ ಫಲವತ್ತಾಗಲಿದೆ. ನ್ಯಾನೋ ಯೂರಿಯ ಮತ್ತು ನ್ಯಾನೋ ಡಿಎಪಿ ಬಳಕೆಯೂ ಫಲಕಾರಿಯಾಗಲಿದೆ ಎಂದು ತಿಳಿಸಿದರು.
ಕೃಷಿ ಅಧಿಕಾರಿಶರಣಬಸವ ಬಿರಾದರ, ಎಟಿಎಂ ಸುಭಾಶ ನಾಟೇಕರ, ಲೆಕ್ಕಾಧಿಕಾರಿ ಕಾರ್ತಿಕ, ರೈತ ಅನುವುಗಾರರಾದ ವೆಂಕಟೇಶ, ವೀರೇಶಸ್ವಾಮಿ, ಮಾಣಿಕಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.
Quote - ಅಧಿಕೃತ ಮಾರಾಟಗಾರರಲ್ಲೇ ಬಿತ್ತನೆ ಬೀಜ ಖರೀದಿಸಿ. ಕಡ್ಡಾಯವಾಗಿ ರಸೀದಿ ಪಡೆದು ರಾಶಿಯಾಗುವವರೆಗೂ ಮನೆಯಲ್ಲಿಟ್ಟುಕೊಳ್ಳಿ. ಗಡಿ ಗ್ರಾಮಗಳಲ್ಲಿ ಎಲ್ಲಿಂದಲೋ ಬಂದು ಮಾರುವ ಅನಧಿಕೃತ ಪೊಟ್ಟಣಗಳಲ್ಲಿನ ಮತ್ತು ಲೇಬಲ್ ಇಲ್ಲದ ಹತ್ತಿ ಬೀಜವನ್ನು ಖರೀದಿಸಬಾರದು ಮಲ್ಲಿಕಾರ್ಜುನ ವಾರದ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.