
ವಡಗೇರಾ: ತಾಲ್ಲೂಕಿನ ಹಾಲಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕುಡುಕರ ಹಾಗೂ ಪುಂಡಪೋಕರಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಈ ಶಾಲೆಯಲ್ಲಿ ಒಂದನೇಯ ತರಗತಿಯಿಂದ ಎಂಟನೇಯ ತರಗತಿಯವರೆಗೆ ಸುಮಾರು 400 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.
ಮಧ್ಯಾಹ್ನವಾದರೆ ಸಾಕು ಕುಡುಕರು ಶಾಲಾ ಆವರಣದಲ್ಲಿ ಬಂದು ರಾಜಾರೋಷವಾಗಿ ಮದ್ಯವನ್ನು ಕುಡಿದು ಶಾಲಾ ಆವರಣದಲ್ಲಿಯೇ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಾರೆ. ಅಷ್ಟೆ ಅಲ್ಲ ನಶೆ ಹೆಚ್ಚಾದಾಗ ಶಾಲಾ ಕೋಣೆಗಳ ಬಾಗಿಲುಗಳನ್ನು ಮುರಿದು ಹೋಗುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶಾಲಾ ಆವರಣ, ಶಾಲಾ ಕೋಣೆಗಳಲ್ಲಿ ಅಲ್ಲಲ್ಲಿ ಗುಟ್ಕಾ ಪೌಚ್‌ಗಳು, ಬೀಡಿ ಸೀಗರೇಟಿನ ತುಂಡುಗಳು, ಮದ್ಯದ ಖಾಲಿ ಬಾಟಲಿಗಳು ಬಿದ್ದಿವೆ. ಇದನ್ನು ಶಾಲೆಯ ಅಡುಗೆ ಸಿಬ್ಬಂದಿ ಪ್ರಶ್ನಿಸಿದರೆ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕುಡುಕರ ಹಾವಳಿಯಿಂದ ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದರು.
‘ಮಕ್ಕಳ ಮನಸ್ಸು ಹೂ ತೋಟದಲ್ಲಿ ಅರಳುವ ಹೂಗಳಂತೆ’, ‘ಶಾಲೆ ಎಂಬುದು ದೇವಾಲಯವಿದ್ದಂತೆ, ಶಾಲಾ ಕೊಠಡಿಗಳು ದೇವರ ಗರ್ಭ ಗುಡಿಯಂತೆ ಅದಕ್ಕಾಗಿ ಶಾಲೆ ಮುಂದೆ ಕೈ ಮುಗಿದು ಬಾ’ ಎಂಬ ಉದ್ಘೋಷಣೆಯ ಬರಹವನ್ನು ಶಾಲೆ ಗೋಡೆಗಳ ಮೇಲೆ ಬರೆಯಲಾಗಿದೆ. ಆದರೆ ಈ ಬರಹಗಳು ಮದ್ಯಪ್ರಿಯರು ಹಾಗೂ ಪುಂಡ ಪೋಕರಿಗಳಿಗೆ ಮನ ತಟ್ಟುವುದಿಲ್ಲ. ಶಾಲೆಯ ಬಗ್ಗೆ ಅವರಿಗೆ ಗೌರವ ಹಾಗೂ ಅಭಿಮಾನವಿಲ್ಲವೂ ಇಲ್ಲ ಎಂದು ಗ್ರಾಮದ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಾರೆ.
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಶಾಲೆಯ ಗೌರವ ಹಾಗೂ ಘನತೆಯನ್ನು ಕಾಪಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಶಾಲಾ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಕುಡಿದು ಅಲ್ಲಿಯೇ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
–ತಾಯಪ್ಪ ನಾಯಕೋಡಿ ಎಸ್‌ಡಿಎಂಸಿ ಅಧ್ಯಕ್ಷ
ಕಿಡಿಗೇಡಿಗಳು ಶಾಲಾ ಕೋಣೆಗಳ ಕಿಟಕಿ ಬಾಗಿಲುಗಳನ್ನು ಮುರಿದು ಹಾಳು ಮಾಡಿದ್ದಾರೆ. ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ
–ರಾಜಶೇಖರ ಕಲ್ಮನಿ ಪಾಲಕ ಹಾಲಗೇರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.