ADVERTISEMENT

ವಡಗೇರಾ: ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:16 IST
Last Updated 22 ಜುಲೈ 2025, 4:16 IST
ವಡಗೇರಾ ತಾಲ್ಲೂಕಿನ ಹಯ್ಯಾಳ(ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಜರುಗಿತು 
ವಡಗೇರಾ ತಾಲ್ಲೂಕಿನ ಹಯ್ಯಾಳ(ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಜರುಗಿತು    

ವಡಗೇರಾ: ತಾಲ್ಲೂಕಿನ ಹಯ್ಯಾಳ(ಬಿ) ಗ್ರಾಮದ ಸಗರನಾಡಿನ ಆರಾಧ್ಯ ದೈವ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ಭಾನುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಸಂಭ್ರಮದಿಂದ ಜರುಗಿತು.

ಹಿನ್ನೆಲೆ: ಸುತ್ತಮುತ್ತಲ ಗ್ರಾಮದ ಕುರಿಗಾಹಿಗಳು ತಮ್ಮ ಕುರಿಗಳನ್ನು ದೇವಸ್ಥಾನದ ಮುಂದೆ ಕರೆತರುವುದರ ಜತೆಗೆ ಕುರಿ ಕಾಯುವವರು ಪ್ರತಿ ವರ್ಷ ಹೊಸದಾದ ಕೋಲುಗಳನ್ನು ತಂದು ಹೊಸ ಮಣ್ಣಿನ ಗಡಿಗೆಯಲ್ಲಿ ಕುರಿ ಹಾಗೂ ಆಕಳ ಹಾಲು ತುಂಬಿಸಿ ಗರ್ಭಗುಡಿಯ ಮುಂದೆ ಕೋಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು.

ಕುರಿಗಳಿಗೆ ಯಾವುದೇ ರೀತಿಯ ರೋಗ ಬಾರದಿರಲಿ, ಕುರಿಗಳ ಸಂತತಿ ಸಮೃದ್ಧಿಯಾಗಲಿ, ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಲಿ ಎಂದು ಹೈಯಾಳಲಿಂಗೇಶ್ವರರಲ್ಲಿ ಬೇಡಿಕೊಂಡು ಏಳು ಕೋಟಿಗೆ ಏಳು ಕೋಟಿಗೆ ಅಂತಾ ಘೋಷಣೆ ಕೂಗಿ ಹಾಲು ಭಂಡಾರವನ್ನು ಮಿಶ್ರಣ ಮಾಡಿ ಗುಡಿಯ ಸುತ್ತಲೂ ಕುರಿಗಳ ಮೇಲೆ ಚರಗ ಚೆಲ್ಲಿದರು.

ADVERTISEMENT

ಚಿಕ್ಕ ಮಕ್ಕಳನ್ನು ಬೆಕ್ಕುಗಳಾಗಿ ಮಾಡಿ ಅವರಿಗೆ ಹಾಲು ಕುಡಿಸುವುದು ತುಂಬಾ ವಿಶೇಷವಾಗಿದೆ. ಈ ಹಾಲು ಹಬ್ಬವನ್ನು ಭಕ್ತರೆಲ್ಲರೂ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.

ಭಂಡಾರ, ಹಾಲು, ಪ್ರಕೃತಿ ಸಮೃದ್ಧಿಯ ಸಂಕೇತವಾಗಿವೆ. ನಾಡಿನ ತುಂಬಾ ಉತ್ತಮ ಮಳೆ, ಬೆಳೆ ಆರೋಗ್ಯ ಸಮೃದ್ಧಿಗಾಗಿ ಪ್ರತಿವರ್ಷ ಆಚರಿಸುವ ಹಬ್ಬವೇ ಹಾಲಹಬ್ಬ ಎಂದು ಗ್ರಾಮದ ಹಿರಿಯರು ಹಾಗೂ ಗುಡಿ ಪೂಜಾರಿಗಳು ಹೇಳುತ್ತಾರೆ.

ಹೈಯ್ಯಾಳ ಲಿಂಗೇಶ್ವರ ಜಾತ್ರೆ ನೂಲು ಹುಣ್ಣಿಮೆಯಂದು ಜರುಗುತ್ತದೆ. 21 ದಿನ ಉಪವಾಸ ಹಿಡಿವ ಮಹಿಳೆಯರು ಅಂದು ಉಪವಾಸ ಮುಕ್ತಾಯಗೊಳಿಸಿ ಮನೆಯಲ್ಲಿ ನೈವೇದ್ಯ ರೂಪದಲ್ಲಿ ಹೋಳಿಗೆ ಕರ್ಚಿಕಾಯಿ, ಕಡಬು, ಇನ್ನಿತರ ಖಾಧ್ಯಗಳನ್ನು ಮಾಡಿ ಬುಟ್ಟಿಯಲ್ಲಿ ತುಂಬಿಕೊಂಡು ದೇವರಿಗೆ ಅರ್ಪಿಸುವರು.

ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳು, ಸುತ್ತಮುತ್ತಲಿನ ಗ್ರಾಮದ ಭಕ್ತರು, ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.