ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಐಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಚನಾಳ ಗ್ರಾಮದಲ್ಲಿ ಗ್ರಾಮಸ್ಥರಿಗೆ ಯಾವುದೆ ರೀತಿಯ ಮೂಲಭೂತ ಸೌಕರ್ಯಗಳಿಲ್ಲ.
ಹಂಚನಾಳದಲ್ಲಿ ಸುಮಾರು 2,500 ಜನಸಂಖ್ಯೆ ಇದ್ದು, 1100 ಕ್ಕಿಂತ ಅಧಿಕ ಮತದಾರರು ಇದ್ದಾರೆ. ಹಂಚನಾಳ ಗ್ರಾಮದಿಂದ 4 ಜನ ಗ್ರಾಮ ಪಂಚಾಯತಿಯ ಸದಸ್ಯರು ಆಯ್ಕೆಯಾಗುತ್ತಾರೆ. ಇಲ್ಲಿಯವರೆಗೂ ಗ್ರಾಮಸ್ಥರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಾದ ಒಳಚರಂಡಿ, ರಸ್ತೆ, ಶೌಚಾಲಯ ಹಾಗೂ ಇನ್ನಿತರ ಅಗತ್ಯ ಸೇವೆಗಳನ್ನು ಒದಗಿಸಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕೆಸರು ಗದ್ದೆಯಾದ ರಸ್ತೆಗಳು:
ಗ್ರಾಮದ ಬಡಾವಣೆಯಲ್ಲಿ ಇರುವ ರಸ್ತೆಗಳು ಕೆಸರು ಗದ್ದೆಯಾಗಿವೆ. ಈ ಗ್ರಾಮದಲ್ಲಿ ಯಾವುದೆ ರೀತಿಯ ಸಿಸಿ ರಸ್ತೆಗಳು ಇಲ್ಲ. ಮಣ್ಣಿನ ರಸ್ತೆಗಳು ಇರುವುದರಿಂದ ಮಳೆಯ ನೀರು ಬಡಾವಣೆಯ ರಸ್ತೆಯ ಮೇಲೆ ಸಂಗ್ರಹವಾಗಿ ಗ್ರಾಮಸ್ಥರಿಗೆ ನಡೆದಾಡಲು ಸಾಕಷ್ಟು ಸಮಸ್ಯೆಯಾಗುತ್ತಿದೆ.
ಗ್ರಾಮದ ಬಲಭೀಮ ದೇವಸ್ಥಾನಕ್ಕೆ ಹೋಗುವ ರಸ್ತೆ ಮೇಲೆ ಹೊಲಸು ಹಾಗೂ ಮಳೆಯ ನೀರು ಸಂಗ್ರಹವಾಗಿ ಕೆಸರು ಗದ್ದೆಯಾಗಿದೆ. ದೇವಸ್ಥಾನಕ್ಕೆ ಹೋಗುವ ಭಕ್ತರು ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ. ಗ್ರಾಮದ ವಿವಿಧ ಬಡಾವಣೆ ರಸ್ತೆಗಳು ಕೆಸರಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಕೈಕಾಲುಗಳನ್ನು ಮುರಿದು ಕೊಂಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಒಳಚರಂಡಿಗಳಿಲ್ಲ:
ಹಂಚನಾಳ ಗ್ರಾಮದ ಯಾವುದೇ ಬಡವಾಣೆಯಲ್ಲಿ ಅಲೆದಾಡಿದರೆ ಒಳಚರಂಡಿ ಗೋಚರಿಸುವುದಿಲ್ಲ. ಎತ್ತ ನೋಡಿದರೂ ಮನೆಗಳ ಬಚ್ಚಲು ನೀರು ಬಡಾವಣೆಗಳ ರಸ್ತೆಯ ಮೇಲೆ ಹರಿಯುತ್ತವೆ. ಇದರಿಂದ ಚರಂಡಿ ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಹಾಳಾದ ಜೆಜೆಎಂ ಪೈಪ್‌ಗಳು:
ಗ್ರಾಮದಲ್ಲಿ ಈಗಾಗಲೇ ಜೆಜೆಎಂ ಕಾಮಗಾರಿ ಮುಗಿದು ಹೋಗಿದೆ. ಆದರೆ ನೀರು ಸರಬರಾಜು ಮಾಡುವ ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿರುವುದರಿಂದ ಹೊಲಸು ನೀರು ಪೈಪ್‌ಗಳಲ್ಲಿ ಸಂಗ್ರಹವಾಗಿ ಅದೇ ನೀರು ಮನೆಗಳ ನಳಗಳಿಗೆ ಸರಬರಾಜು ಆಗುತ್ತಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಶೌಚಾಲಯಗಳಿಲ್ಲ:
ಹಂಚನಾಳ ಗ್ರಾಮದಲ್ಲಿ ಬೇರಣೆಕೆಯಷ್ಟು ಜನರು ಮಾತ್ರ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಉಳಿದವರು ರಸ್ತೆ ಬದಿಯಲ್ಲಿ ಇಲ್ಲವೆ ಜಾಲಿ ಗಿಡಗಳ ಪೊದೆಗಳಲ್ಲಿ ನಿಸರ್ಗ ಕ್ರಿಯೆಯನ್ನು ಮುಗಿಸುತ್ತಾರೆ.
ಗ್ರಾಮಗಳಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಚರಂಡಿ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನೂ ಕೆಲವೆ ದಿನಗಳಲ್ಲಿ ಚರಂಡಿ ಕಾಮಗಾರಿಯನ್ನು ಆರಂಭಿಸಲಾಗುವುದು.ದೇವಿಂದ್ರಪ್ಪ, ಪಿಡಿಒ, ಐಕೂರ
ಗ್ರಾಮದಲ್ಲಿ ಮೂಲಭೂತ ಸೌರ್ಯಗಳನ್ನು ಮರೀಚಿಕೆಯಾಗಿವೆ. ಪಂಚಾಯಿತಿಯಿಂದ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು.ದಂಡಪ್ಪಗೌಡ ಪೊಲೀಸ್ ಪಾಟೀಲ, ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.