ADVERTISEMENT

ಹುಣಸಗಿ: ಚುರುಕು ಪಡೆದ ಭತ್ತದ ರಾಶಿ

ಉತ್ತಮ ಧಾರಣೆ ನಿರೀಕ್ಷೆಯಲ್ಲಿ ಅನ್ನದಾತ

ಭೀಮಶೇನರಾವ ಕುಲಕರ್ಣಿ
Published 17 ಏಪ್ರಿಲ್ 2025, 5:36 IST
Last Updated 17 ಏಪ್ರಿಲ್ 2025, 5:36 IST
ಹುಣಸಗಿ ಪಟ್ಟಣದ ಹೊರವಲಯದಲ್ಲಿ ಯಂತ್ರದಿಂದ ಭತ್ತದ ಕಟಾವು ಮಾಡಲಾಯಿತು
ಹುಣಸಗಿ ಪಟ್ಟಣದ ಹೊರವಲಯದಲ್ಲಿ ಯಂತ್ರದಿಂದ ಭತ್ತದ ಕಟಾವು ಮಾಡಲಾಯಿತು   

ಹುಣಸಗಿ: ತಾಲ್ಲೂಕು ಸೇರಿದಂತೆ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಲಾಗಿರುವ ಭತ್ತದ ಕಟಾವು ಆರಂಭವಾಗಿದ್ದು ಬಹುತೇಕ ರೈತರು ರಾಶಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಹುಣಸಗಿ ತಾಲ್ಲೂಕಿನಲ್ಲಿ ಅಂದಾಜು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಲಾಗಿದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ ಚಾಲು ಬಂದಿ ಕ್ರಮದಂತೆ ಕಾಲುವೆಗೆ ನೀರು ಹರಿಸಲಾಗಿತ್ತು. ಮಾರ್ಚ್‌ ತಿಂಗಳಲ್ಲಿ ಭತ್ತ ಕಾಳು ಕಟ್ಟುವ ಹಂತದಲ್ಲಿದ್ದಾಗ ನೀರಿಗಾಗಿ ಹೋರಾಟ ಮಾಡಲಾಗಿತ್ತು. 

‘ಸರ್ಕಾರ ಏಪ್ರಿಲ್ ಮೊದಲ ವಾರದಲ್ಲಿ ಮೂರು ದಿನಗಳವರೆಗೆ ನೀರು ಹರಿಸಿದ್ದರಿಂದ ಬೆಳೆ ನಮ್ಮ ಕೈ ಸೇರುವಂತಾಗಿದೆ. ಈಗ ನೀರಾಳವಾಗಿದ್ದೇವೆ’ ಎಂದು ತಾಲ್ಲೂಕಿನ ಮುದನೂರು, ತೆಗ್ಗೇಳ್ಳಿ, ಕನ್ನೇಳ್ಳಿ ಹಾಗೂ ಬೈಚಬಾಳ, ಅರಕೇರಾ ಗ್ರಾಮದ ರೈತರು ಹೇಳುತ್ತಾರೆ.

ADVERTISEMENT

ಈಗಾಗಲೇ ಕಟಾವು ಮಾಡುದ ಭತ್ತ ಎಕರೆಗೆ 45 ರಿಂದ 50 ಚೀಲದಂತೆ ಇಳುವರಿ ಬರುತ್ತಿದೆ. ಉತ್ತಮ ಧಾರಣೆ ಲಭ್ಯವಾದರೇ ಮಾತ್ರ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಕಾಮನಟಗಿ ಗ್ರಾಮದ ರೈತರಾದ ನರಸಿಂಹರಾವ್ ಜಹಗಿರದಾರ ಹಾಗೂ ದ್ಯಾಮನಹಾಳ ಗ್ರಾಮದ ಲಕ್ಷ್ಮೀಕಾಂತ ಕುಲಕರ್ಣಿ ಹೇಳಿದರು. 

ಕಳೆದ ವಾರದಿಂದ ರಾಶಿ ಮಾಡುವ ಕಾರ್ಯ ಆರಂಭವಾಗಿದ್ದು ಮೂರು ದಿನಗಳಿಂದ ರಾಶಿ ಕಾರ್ಯ ವೇಗ ಪಡೆದಿದೆ ಎಂದು ವಜ್ಜಲ ಗ್ರಾಮದ ಸಂತೋಷ ಪಾಟೀಲ ಹಾಗೂ ಚಂದ್ರಶೇಖರ ಬೋರಮಗುಂಡ ತಿಳಿಸಿದರು.

ಹೆಚ್ಚಿನ ಕಟಾವು ಯಂತ್ರಗಳು ಗ್ರಾಮಿಣ ಭಾಗದಲ್ಲಿ ಲಗ್ಗೆ ಇಟ್ಟಿದ್ದರಿಂದ ಅಭಾವ ಇಲ್ಲದಂತಾಗಿದೆ. ಸಿಂಧನೂರು, ಗಂಗಾವತಿ ಭಾಗದಿಂದ 500ಕ್ಕೂ ಹಚ್ಚು ಯಂತ್ರಗಳು ಅಚ್ಚುಕಟ್ಟು ಪ್ರದೇಶಕ್ಕೆ ಬಂದಿವೆ ಎಂದು ಹೇಳಲಾಗಿದೆ.

ಈ ಬಾರಿ ಬಹುತೇಕ ರೈತರು ಕಾವೇರಿ, ಆರ್.ಎನ್.ಆರ್ ತಳಿಯ ಭತ್ತ ನಾಟಿ ಮಾಡಿಕೊಂಡಿದ್ದರು. ಕ್ರಿಮಿನಾಶಕ ಹಾಗೂ ರಸಗೊಬ್ಬರದ ಹಾಕಿದ್ದರಿಂದ ಎಕರೆಗೆ ಸುಮಾರು 40 ಸಾವಿರ ಖರ್ಚು ಬಂದಿದೆ ಎಂದು ಮಾಳನೂರು ಗ್ರಾಮದ ರೈತರಾದ ತಿಪ್ಪಣ್ಣ ಕಾರನೂರು ಹೇಳಿದರು.

ಸದ್ಯ ಕಾವೇರಿ ತಳಿಯ ಭತ್ತಕ್ಕೆ 75 ಕೆ.ಜಿಗೆ ₹1,450 ಹಾಗೂ ಆರ್.ಎನ್.ಆರ್ ತಳಿಯ ಭತ್ತಕ್ಕೆ ₹1600 ರಿಂದ ₹1650ವರೆಗೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಉತ್ತಮ ಧಾರಣೆಯ ನೀರಿಕ್ಷೆಯಲ್ಲಿದ್ದೇವೆ ಎಂದು ಚಂದಪ್ಪ ಗಿಂಡಿ ಹಾಗೂ ಮಲ್ಲಣ್ಣ ಮೇಟಿ ವಿವರಿಸಿದರು.

ರಾಜ್ಯದಲ್ಲಿ ಬೆಳೆದಿರುವ ಭತ್ತವನ್ನು ಸರ್ಕಾರದ ಮುಖಾಂತರವೇ ರೈತರಿಂದ ನೇರವಾಗಿ ಖರೀದಿಸಿದಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಅಲ್ಲದೇ ರೈತರ ಆರ್ಥಿಕ ನಷ್ಟ ತಪ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರುವದು ಅಗತ್ಯವಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಹಾಗೂ ಶಂಕರನಾಯಕ ಆಗ್ರಹಿಸಿದ್ದಾರೆ.

ಹುಣಸಗಿ ಪಟ್ಟಣದ ಹೊರವಲಯದಲ್ಲಿ ಒಣಗಲು ಹಾಕಲಾಗಿರುವ ಭತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.