ADVERTISEMENT

ಮನೆ ಊಟ ಮರೆತ್ತಿದ್ದರಿಂದ ಅನಾರೋಗ್ಯ: ಅಶೋಕ ವಾಟಕರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:32 IST
Last Updated 4 ಆಗಸ್ಟ್ 2025, 7:32 IST
ಯಾದಗಿರಿಯಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಿದ ವೈದ್ಯರು 
ಯಾದಗಿರಿಯಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಿದ ವೈದ್ಯರು    

ಯಾದಗಿರಿ: ‘ಮನೆಯಲ್ಲಿ ತಯಾರಿಸಿದ ಊಟವನ್ನು ಮರೆತು ರಸ್ತೆ ಬದಿಯಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ತಿನ್ನುತಿರುವುದರಿಂದ ನಾನಾ ಬಗೆಯ ರೋಗಗಳು ಬರುತ್ತಿವೆ’ ಎಂದು ನಿವೃತ್ತ ಪ್ರೊ. ಅಶೋಕ ವಾಟಕರ್ ಹೇಳಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ‌ಡಾ.ಭೀಮಣ್ಣ ಮೇಟಿ ಫೌಂಡೇಷನ್‌, ಡಿಡಿಯು ಶಿಕ್ಷಣ ಸಮೂಹ ಸಂಸ್ಥೆ ಹಾಗೂ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಹುತೇಕ ಜನರು ಮನೆಯ ಊಟದಿಂದ ಹಿಮ್ಮುಖರಾಗಿದ್ದಾರೆ. ಹೋಟೆಲ್, ರೆಸ್ಟೋರೆಂಟ್, ರಸ್ತೆ ಬದಿಯಲ್ಲಿನ ಆಹಾರ ಸೇವನೆಯಿಂದಾಗಿ 40 ವರ್ಷಗಳು ದಾಟುತ್ತಿದ್ದಂತೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನೆಯಲ್ಲಿಯೇ ‌ಆರೋಗ್ಯಕ್ಕೆ ಭದ್ರವಾದ ಬುನಾದಿ ಹಾಕಬೇಕಿದೆ’ ಎಂದರು.

ADVERTISEMENT

ಮುಖಂಡ ಸುದರ್ಶನ್ ನಾಯಕ್ ಮಾತನಾಡಿ, ‌‘ಜನರಿಗೆ ಆರೋಗ್ಯದ ಮಹತ್ವ ತಿಳಿಸಲು ಇಂತಹ ಶಿಬಿರಗಳ ಅವಶ್ಯವಿದೆ. ದೇಹ ಸ್ವಾಸ್ಥ್ಯವಾಗಿ ಇದ್ದರೆ ಜೀವನ‌ ಮಾಡಲು ಸಾಧ್ಯವಾಗುತ್ತದೆ. ದೇಹದ ‌ಆರೋಗ್ಯ ಕೆಟ್ಟರೆ ಮನೆಯ ಪರಿಸ್ಥಿತಿಯೂ ಬಿಗಡಾಯಿಸುತ್ತದೆ. ನಮ್ಮ ದೇಹದ ಅಂಗಾಂಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಇಟ್ಟುಕೊಳ್ಳಬೇಕು. ಇದಕ್ಕಾಗಿ ಉತ್ತಮ ಆಹಾರ ಸೇವನೆಯೂ ಮಾಡಬೇಕು’ ಎಂದು ಸಲಹೆ ನೀಡಿದರು.

ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಭೀಮಣ್ಣ ಮೇಟಿ ಮಾತನಾಡಿ, ‘ಭೂಮಿಗೆ ಬಂದ ಮನುಷ್ಯ ಶಾಲೆಯ ಮೆಟ್ಟಿಲು ಹತ್ತಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದಾಗ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಹೀಗಾಗಿ, ಶಿಕ್ಷಣ ಮತ್ತು ಆರೋಗ್ಯ ನಮ್ಮ ಇಂದಿನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿವೆ’ ಎಂದರು.

‘ಪ್ರತಿ ವರ್ಷ ಹೊಸ ಬಗೆಯ ರೋಗಗಳು ಬರುತ್ತಿದ್ದು, ವೈದ್ಯಕೀಯ ತಜ್ಞರು ಅವುಗಳಿಗೆ ಮದ್ದು ಕಂಡುಕೊಳ್ಳುವಲ್ಲಿ ನಿರತವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ದುಡಿಯುವವರಿಗೆ ವರ್ಷಗಳಿಂದ ರೋಗ ಬಂದಿದ್ದರೂ ಅದನ್ನು ಲೆಕ್ಕಿಸದೆ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

‘ತಪಾಸಣೆಯ ವೇಳೆಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯ ಇದ್ದವರಿಗೆ ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುವುದು. ಶಸ್ತ್ರಚಿಕಿತ್ಸೆಗೂ ಮುನ್ನ ದೇಹದ ಅಂಗಾಂಗಳ ತಪಾಸಣೆ ಮಾಡಿ, ವರದಿ ಪಡೆದು ತಜ್ಞರ ಅಭಿಪ್ರಾಯ ಕೇಳಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಒಂದಿಷ್ಟು ಸಮಯ ತಗಲುತ್ತದೆ. ಇದಕ್ಕೆ ರೋಗಿಗಳು ಸಹಕರಿಸಬೇಕು’ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನಿಲೋಫರ್ ಬಾದಲ್, ಕಾಂಗ್ರೆಸ್ ಮುಖಂಡ ಇಮ್ರಾನ್ ಶೇಖ್, ಡಾ.ಅಜಯ್ ಕೆ.ಟಿ., ಡಾ.ಕಾರ್ತಿಕ್, ಬಸವರಾಜಪ್ಪ ಗೌಡ ದಳಪತಿ, ಆನಂದ್ ಕುಮಾರ್ ಸೇರಿ ಹಲವರು ಪಾಲ್ಗೊಂಡಿದ್ದರು.

ನೂರಾರು ಮಂದಿಗೆ ಹೃದಯ ರೋಗ, ನರ ರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ತಪಾಸಣಾ ಮಾಡಲಾಯಿತು. ಅಗತ್ಯ ಇದ್ದವರಿಗೆ ಇಕೋ ಪರೀಕ್ಷೆಯೂ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.