ಯಾದಗಿರಿ: ‘ಚಿಕ್ಕ ಮಕ್ಕಳಲ್ಲಿನ ವಾಕ್ ಮತ್ತು ಶ್ರವಣ ದೋಷಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ‘ಯಿಮ್ಸ್’ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕುಮಾರ ಅಂಗಡಿ ಹೇಳಿದರು.
ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ‘ಯಿಮ್ಸ್’, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮ ಹಾಗೂ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ) ಸಹಯೋಗದಲ್ಲಿ ಆಯೋಜಿಸಿದ್ದ ಶ್ರವಣ ದೋಷವುಳ್ಳ ಮಕ್ಕಳ ತಪಾಸಣೆ ಹಾಗೂ ಪೋಷಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾತು ಬಾರದ, ಶ್ರವಣದೋಷ ಹೊಂದಿರುವ ಮಕ್ಕಳಿಗೆ 8 ವರ್ಷಗಳ ಒಳಗೆ ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಮಕ್ಕಳಲ್ಲಿನ ಅಂಗಾಂಗಗಳು ಬೆಳವಣಿಗೆಯ ಹಂತದಲ್ಲಿ ಇರುವುದರಿಂದ ಶ್ರವಣ ಸಾಧನಗಳನ್ನು ಅಳವಡಿಸಿ, ಸ್ವಲ್ಪ ಮಟ್ಟಿಗಾದರು ಅವರಿಗೆ ಕಿವಿ ಕೇಳುವಂತೆ ಮಾಡಬಹುದು’ ಎಂದರು.
‘ಶ್ರವಣ ದೋಷವುಳ್ಳ ಮಕ್ಕಳಿಗಾಗಿಯೇ ಸರ್ಕಾರ ಅನೇಕ ಸವಲತ್ತು ಒದಗಿಸುತ್ತಿದೆ. ಕಲಬುರಗಿಯಲ್ಲಿಯೂ ಇಲ್ಲದ ಶೀಘ್ರ ಮಧ್ಯಸ್ಥಿಕೆ ಕೇಂದ್ರವನ್ನು ಯಾದಗಿರಿಯಲ್ಲಿ ಸ್ಥಾಪಿಸಲಾಗಿದೆ. ಪೋಷಕರು ಇದನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಮುಂದಾಗಬೇಕು. ಸಂಘ–ಸಂಸ್ಥೆಗಳು ಸಹ ಸರ್ಕಾರದ ಯೋಜನೆಗಳನ್ನು ತಲುಪಿಸಲು ಕೈಜೋಡಿಸಬೇಕು’ ಎಂದು ಹೇಳಿದರು.
ಎಪಿಡಿಯ ರಾಜ್ಯ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ರಮೇಶ ಮಾನೆ ಮಾತನಾಡಿ, ‘ಶ್ರವಣದೋಷ ಹೊಂದಿರುವ ಮಕ್ಕಳ ಮಾತು, ಭಾಷೆ ಬೆಳೆಯಬೇಕಾದರೆ ಅವರಿಗೆ ಯಾವಾಗಲೂ ಸಂಪರ್ಕ ಮತ್ತು ಸಂವಹನದ ಅವಶ್ಯಕತೆ ಇದೆ. ಹೀಗಾಗಿ, ಎರಡು ದಿನ ನಡೆಯುವ ತರಬೇತಿಯಲ್ಲಿ ಮಕ್ಕಳ ಪೋಷಕರಿಗೆ ಸನ್ನೆ ಭಾಷೆಯನ್ನು ಕಲಿಸಲಾಗುವುದು’ ಎಂದರು.
‘ಶ್ರವಣ ದೋಷ ಇರುವ ಮಕ್ಕಳಿಗೆ ಸರಿಯಾದ ಚಿಕಿತ್ಸೆ, ಸ್ಪೀಚ್ ಮತ್ತು ಲಿಸ್‌ನಿಂಗ್ ಥೆರಪಿ, ದೋಷದ ಮಟ್ಟದ ಆಧರಿಸಿ ಶ್ರವಣ ಉಪಕರಣಗಳನ್ನು ನೀಡಿ, ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಉತ್ತಮ ಶಿಕ್ಷಣ ದೊರೆತಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ. ಶ್ರವಣ ದೋಷದ ನಡುವೆಯೂ ಶಿಕ್ಷಣ ಪಡೆದವರು ಬ್ಯಾಂಕ್, ಜ್ಯುವೆಲರಿ ಶಾಪ್‌ಗಳಲ್ಲಿ ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ’ ಎಂದು ಹೇಳಿದರು.
65ಕ್ಕೂ ಹೆಚ್ಚು ಮಕ್ಕಳಿಗೆ ತಪಾಸಣೆ ಮಾಡಿ, ಅವರ ಪೋಷಕರಿಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಪಿಡಿ ತಾಲ್ಲೂಕು ಸಂಯೋಜಕ ರಮೇಶ ಕಟ್ಟಿಮನಿ, ಆಡಿಯಾಲಜಿಸ್ಟ್ ಡಾ. ವಿಜಯಕುಮಾರ್, ಕೇಂದ್ರದ ವ್ಯವಸ್ಥಾಪಕ ಶಿವಲಿಂಗಪ್ಪ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.