ADVERTISEMENT

ಸುರಪುರ| ಹಿಂದೂ ಧರ್ಮದ ರಕ್ಷಣೆಗೆ ಕಂಕಣಬದ್ಧರಾಗಿ: ಕಿರಣ ಗುಡ್ಡದಕೇರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:12 IST
Last Updated 25 ಜನವರಿ 2026, 7:12 IST
ಸುರಪುರದಲ್ಲಿ ಶನಿವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿದರು
ಸುರಪುರದಲ್ಲಿ ಶನಿವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿದರು   

ಸುರಪುರ: ‘ರಾಷ್ಟ್ರ ಹಿತಕ್ಕಾಗಿ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹಿಂದೂ ಎಂಬ ಭಾವನೆ ಬೆಳೆಸಿಕೊಂಡು ಧರ್ಮ ರಕ್ಷಣೆಗೆ ಕಂಕಣಬದ್ಧರಾಗಬೇಕು’ ಎಂದು ಹುಬ್ಬಳ್ಳಿಯ ವಾಗ್ಮಿ ಕಿರಣ ಗುಡ್ಡದಕೇರಿ ಹೇಳಿದರು.

ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಒಳ ಜಗಳದಿಂದ ಭಾರತಕ್ಕೆ ವಿಶ್ವ ಗುರುವಿನ ಪಟ್ಟ ವಂಚಿತವಾಯಿತು. ದೇಶದ ಪ್ರತಿಯೊಬ್ಬ ಹಿಂದೂ ಒಂದಾಗಬೇಕು. ದೇಶ ಮೊದಲು ಎಂಬ ಭಾವನೆ ಬಂದಾಗ ಭಾರತ ವಿಶ್ವ ಗುರುವಿನ ಪಟ್ಟ ಅಲಂಕರಿಸಲಿದೆ. ಭಾರತ ಶ್ರೇಷ್ಠವಾದ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ’ ಎಂದರು.

ADVERTISEMENT

‘ಹಿಂದೂ ಸಮಾಜದ ಏಕತೆಗಾಗಿ ದೇಶದ ಹಲವೆಡೆ ಸಮ್ಮೇಳನ ಆಯೋಜಿಸಲಾಗುತ್ತಿದೆ. ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎಂಬ ಭಾವ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು. ಸ್ವಧರ್ಮದ ಬಗ್ಗೆ ಅಭಿಮಾನ ಇರಬೇಕು. ಪರಿಸರ ರಕ್ಷಣೆ, ನೀರಿನ ಮಿತ ಬಳಕೆ, ಸ್ವದೇಶಿ ಭಾಷೆ, ಸ್ವದೇಶಿ ವಸ್ತುಗಳ ಬಳಕೆಯೂ ಹೆಚ್ಚಾಗಬೇಕು’ ಎಂದು ಹೇಳಿದರು.

ಶಹಾಪುರ ಹಿರೇಮಠದ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿ, ‘ಭಾರತದ ಹಿರಿಮೆ, ಗರಿಮೆ, ಸಂಸ್ಕೃತಿ, ಸಂಸ್ಕಾರ ಅಪಾರವಾಗಿದೆ. ನಮ್ಮಲ್ಲಿನ ಹಲವು ವಿಶ್ವವಿದ್ಯಾಲಯಗಳು ಜಗತ್ತಿಗೆ ಉನ್ನತ ಜ್ಞಾನ ಕೊಟ್ಟಿವೆ. ಋಷಿ ಮುನಿಗಳು ಖಗೋಳ ಶಾಸ್ತ್ರದಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದು, ಅದರ ಸತ್ಯವನ್ನು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ’ ಎಂದರು.

‘ಪ್ರಪಂಚಕ್ಕೆ ವೈಜ್ಞಾನಿಕ ಉಡುಗೆ, ತೊಡುಗೆ, ಆಹಾರ ಪದ್ಧತಿಯನ್ನು ಮೊಟ್ಟ ಮೊದಲಗೆ ಕೊಟ್ಟ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ನಮ್ಮವರು ಹಾಕಿ ಕೊಟ್ಟು ಮೌಲ್ಯಗಳನ್ನು ಕಡೆಗಣಿಸಿ ನಾವೇ ಹಾಳಾಗುತ್ತಿದ್ದೇವೆ. ಋಷಿಮುನಿಗಳು, ಹಿರಿಯರು ಕೊಟ್ಟಿರುವ ಜ್ಞಾನವನ್ನು ಪಾಲಿಸಬೇಕು’ ಎಂದು ಹೇಳಿದರು.

‌ಸಮ್ಮೇಳನದಲ್ಲಿ ಆಯೋಜನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಡೇಚೂರು, ಪ್ರಮುಖರಾದ ಅಮರೇಶ ಚಿಲ್ಲಾಳ, ರಾಜೇಂದ್ರ ಯಾದವ, ರಾಮಪ್ರಸಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗಮನಸೆಳೆದ ಭವ್ಯ ಶೋಭಾಯಾತ್ರೆ

ಸಮ್ಮೇಳನದ ಅಂಗವಾಗಿ ಭವ್ಯ ಶೋಭಾಯಾತ್ರೆ ಜರುಗಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಯಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿ ಭಾರತ್ ಮಾತಾ ಕೀ ಜೈ ಸೇರಿ ದೇಶಭಕ್ತಿಯ ಘೋಷಣೆಗಳನ್ನು ಹಾಕಿದರು. ವಿವಿಧ ಕಲಾ ತಂಡಗಳು ವಾದ್ಯ ಮೇಳಗಳು ಸಾರೋಟದಲ್ಲಿ ಭಾರತ ಮಾತೆ ಆಟೊಗಳ ಮೇಲೆ ದೇವರು ಸಂತರು ಶರಣರು ಮಹಾತ್ಮರ ದೇಶದ ಮಹಾನ ನಾಯಕರ ಸ್ತಬ್ಧ ಚಿತ್ರಗಳು ನೋಡುಗರ‌ನ್ನು ಸೆಳೆದವು.