ADVERTISEMENT

ಹುಣಸಗಿ | ಹಿಂದೂ ಎನ್ನುವದು ಉತ್ಕೃಷ್ಟ ಜೀವನ ಪದ್ಧತಿ: ಅನೀಲಕುಮಾರ ಬಿರಾದಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:51 IST
Last Updated 26 ಜನವರಿ 2026, 7:51 IST
ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ರಾಷ್ಟ್ರನಾಯಕರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು 
ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ರಾಷ್ಟ್ರನಾಯಕರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು    

ಹುಣಸಗಿ: ‘ಹಿಂದೂ ಎನ್ನುವುದು ಕೇವಲ ಒಂದು ಮತ, ಸಮುದಾಯವಲ್ಲ ಬದಲಿಗೆ, ಅದು ಈ ದೇಶದ ತತ್ವ ಜ್ಞಾನಿಗಳ ಸಂಸ್ಕೃತಿ, ಅದು ಉತ್ಕೃಷ್ಟ ಜೀವನ ಪದ್ಧತಿಯಾಗಿದೆ’ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬಿರಾದಾರ ಹೇಳಿದರು.

ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಮ್ಮ ಪೂರ್ವಿಕರು ಅನಾದಿ ಕಾಲದಿಂದಲೂ ತಮ್ಮದೇ ಆದ ಐತಿಹಾಸಿಕ ಪರಂಪರೆ ಸಂಸ್ಕೃತಿಯನ್ನು ಕಾಪಾಡಿಕೊಂಡು ಅದನ್ನು ಉಳಿಸಿಕೊಂಡು, ಅಳವಡಿಸಿಕೊಂಡು ಬಂದಿದ್ದಾರೆ. ಇದರ ಫಲವಾಗಿದೆ ಇಂದು ಭಾರತ ದತ್ತ ವಿಶ್ವವೇ ನೋಡುತ್ತಿದೆ. ಹಿಂದೂ ಏನ್ನುವುದು ಸನಾತನ ಧರ್ಮ. ಹಲವು ಧರ್ಮಗಳಿಗೆ ಪ್ರೇರಣೆಯಾಗಿದೆ. ಹಿಂದುತ್ವ ಭಾರತದ ಆಸ್ಮೀತೆ, ಆತ್ಮವಿದ್ದಂತೆ’ ಎಂದು ಹೇಳಿದರು.

ADVERTISEMENT

‘ಇಂದಿನ ಯುವ ಪೀಳಿಗೆ ವಿದೇಶಿ ಸಂಸ್ಕೃತಿಗಳಿಗೆ ಮಾರುಹೋಗುತ್ತಿರುವುದು ಕಳವಳಕಾರಿ. ಹೀಗಾಗಿ ಮನೆ ಹಿರಿಯರು ಮಕ್ಕಳಿಗೆ ಸೂಕ್ತ ಮಾರ್ಗರ್ಶನ ಮಾಡಬೇಕು. ಪ್ಲಾಸ್ಟಿಕ್‌ ಮುಕ್ತ ಭಾರತದತ್ತ ಎಲ್ಲರೂ ಹೆಜ್ಜೆ ಹಾಕೋಣ’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗನಗೌಡ ಮಾಗನೂರ ಮಾತನಾಡಿ, ‘ಜಗತ್ತಿಗೆ ಯೋಗವನ್ನು ಪರಿಚಯಿಸಿರುವುದು ಭಾರತೀಯರು. ಇಂದು ವಿದೇಶಗಳಲ್ಲಿ ಯೋಗ ಜನಪ್ರೀಯತೆ ಪಡೆದಿದೆ. ನಮ್ಮ ಧರ್ಮದ ಒಡೆಯುವ ಕಾರ್ಯ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಆದ್ದರಿಂದ ಅದಕ್ಕೆ ಅನುಕೂಲ ಮಾಡಿಕೊಡದೇ ಹಿಂದು ಎಲ್ಲರೂ ಒಂದು ಎನ್ನುವ ಭಾವನೆ ಬರಬೇಕು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮರಿಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ‘ಭಾವನಾತ್ಮಕವಾಗಿ ನಡೆದುಕೊಳ್ಳುವವರು ಭಾರತೀಯರು, ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ದೊಡ್ಡ ಜವಾಬ್ದಾರಿ ಯುವಕರ ಮೇಲಿದೆ’ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೆಳಿಗ್ಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಭಾರತಮಾತೆಯ ಭಾವಚಿತ್ರ ಸೇರಿದಂತೆ, ಹೋರಾಟಗಾರರ, ರಾಷ್ಟ್ರನಾಯಕರ ಭಾವಚಿತ್ರ ಗಳನ್ನು ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಕುಂಭ, ಕಳಸ ಹಾಗೂ ಡೊಳ್ಳು ಕುಣಿತ ಆಕರ್ಷಕವಾಗಿತ್ತು

ಮುಖಂಡರಾದ ಎಚ್.ಸಿ.ಪಾಟೀಲ, ಚಂದ್ರಶೇಖರಗೌಡ ಮಾಗನೂರ, ಬಿ ಎಂ ಅಳ್ಳಿಕೋಟಿ, ಮಲ್ಲಿಕಾರ್ಜುಗೌಡ ಮುರಾಳ, ತಿರುಪತಿ ವಡಗೇರಿ, ರಾಮನಗೌಡ ವಠಾರ, ಸಿದ್ದಲಿಂಗರಡ್ಡಿ ಪಾಟೀಲ, ಶ್ರೀಶೈಲ ಬಬಲೇಶ್ವರ, ಬಾಸುನಾಯಕ, ಸಿದ್ದನಗೌಡ ಗುಳಬಾಳ, ಸಾಹೇಬಗೌಡ ಗರಡ್ಡಿ, ತಿರುಪತಿ ದೊರಿ, ಸಿದ್ದನಗೌಡ ಲಿಂಗದಳ್ಳಿ, ವಿಶ್ವನಾಥ ಹಿರೇಮಠ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಾತೆಯರು ಪಾಲ್ಗೊಂಡಿದ್ದರು.

ಸೋಮಗೌಡ ಗುಳಬಾಳ ನಿರೂಪಿಸಿದರು. ಪ್ರಭುಗೌಡ ಮಾಲಿ ಪಾಟೀಲ ಸ್ವಾಗತಿಸಿದರು. ಸಂಗೀತಾ ಮುದಗಲ್ಲ ವಂದಿಸಿದರು.

ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ  ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬಿರಾದಾರ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.