ADVERTISEMENT

ಹೋಳಿ ಆಚರಣೆ ಶಾಂತಿಯುತವಾಗಿರಲಿ

ಶಾಂತಿಪಾಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 15:18 IST
Last Updated 19 ಮಾರ್ಚ್ 2019, 15:18 IST
ಯಾದಗಿರಿಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಹೋಳಿ ಶಾಂತಿಸಭೆಯಲ್ಲಿ ನಗರಸಭೆ ಸದಸ್ಯ ವಿಲಾಸ ಪಾಟೀಲ ಮಾತನಾಡಿದರು
ಯಾದಗಿರಿಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಹೋಳಿ ಶಾಂತಿಸಭೆಯಲ್ಲಿ ನಗರಸಭೆ ಸದಸ್ಯ ವಿಲಾಸ ಪಾಟೀಲ ಮಾತನಾಡಿದರು   

ಯಾದಗಿರಿ: ‘ಜಿಲ್ಲೆಯಾದ್ಯಂತ ಮಾರ್ಚ್ 20ರಿಂದ 22ರವರೆಗೆ ನಡೆಯುವ ಹೋಳಿಹಬ್ಬವನ್ನು ಸಾರ್ವಜನಿಕರು ಶಾಂತಿಯುತವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿಎಂ.ಕೂರ್ಮಾ ರಾವ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹೋಳಿ ಹಬ್ಬ ಆಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಲವು ಕಡೆ ಮಾರ್ಚ್‌ 20ರಂದು ಕಾಮದಹನ ಆಚರಿಸುತ್ತಾರೆ. ಮತ್ತೆ ಕೆಲವು ಕಡೆ 21ರಂದು ಕಾಮದಹನ ಆಚರಿಸಿ, 22ರಂದು ಧೂಳಂಡಿ ಆಚರಣೆ ಮಾಡುತ್ತಾರೆ. ಹಿಂದಿನಿಂದ ನಡೆದುಕೊಂಡು ಬಂದಂತೆ ಮತ್ತು ತಮ್ಮ ಸಂಪ್ರದಾಯದಂತೆ ಯಾವ ದಿನ ಬೇಕಾದರೂ ಕಾಮದಹನ ಆಚರಣೆ ಮಾಡಬಹುದು. ಆದರೆ, ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕರಿಸಬೇಕು’ ಎಂದು ಹೇಳಿದರು.

ADVERTISEMENT

‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 21ರಿಂದ ಜಿಲ್ಲೆಯ 54 ಕೇಂದ್ರಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಸಕಲ ವ್ಯವಸ್ಥೆ ಕೈಗೊಳ್ಳಲಾಗುವುದು. ಅದೇ ರೀತಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಣ್ಣ ಎರಚಬಾರದು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ನಿರ್ಭೀತಿಯಿಂದ ಹೋಗಿಬರಲು ಎಲ್ಲರೂ ಸಹಕರಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಬಣ್ಣ ಆಡುವ ಸಮಯದಲ್ಲಿ ಮೊಟ್ಟೆ, ಟೊಮ್ಯಾಟೊ, ಆಯಿಲ್ ಪೇಂಟ್, ವಾರ್ನೀಸ್ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಇನ್ನಿತರ ರಾಸಾಯನಿಕ ಬಣ್ಣಗಳನ್ನು ಬಳಕೆ ಮಾಡಬಾರದು. ಇದರಿಂದ ಮುಖ್ಯವಾಗಿ ಮಕ್ಕಳು ಸೇರಿದಂತೆ ವಯಸ್ಕರಿಗೂ ಚರ್ಮರೋಗ ಬರುವ ಸಾಧ್ಯತೆ ಇರುತ್ತದೆ. ಕಾರಣ ನೈಸರ್ಗಿಕವಾಗಿ ತಯಾರಿಸಿದ ಬಣ್ಣಗಳನ್ನು ಮಾತ್ರ ಬಳಸಬೇಕು’ ಎಂದರು.

‘ಹೋಳಿ ಹಬ್ಬದಂದು ಬಣ್ಣ ಆಡುವುದನ್ನು ಬೆಳಿಗ್ಗೆ 7ರಿಂದ ಪ್ರಾರಂಭಿಸಿ ಮಧ್ಯಾಹ್ನ 1ರವರೆಗೆ ಮುಕ್ತಾಯಗೊಳಿಸಬೇಕು. ಆರೋಗ್ಯಕರವಾದ ಬಣ್ಣ ಮಾರಾಟ ಮಾಡಲು, ಸಾರ್ವಜನಿಕರಿಗೆ ಯಾವುದೇ ರಾಸಾಯನಿಕ ಇಲ್ಲದ ಬಣ್ಣಗಳನ್ನು ಬಳಸುವಂತೆ ಹಾಗೂ ಒತ್ತಾಯ ಪೂರ್ವಕವಾಗಿ ಬಣ್ಣ ಹಾಕದಂತೆ ಆಟೊದಲ್ಲಿ ವ್ಯಾಪಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಅವರಿಗೆ ಸೂಚಿಸಿದರು.

‘ಹೋಳಿ ಆಚರಣೆಯಂದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಡಿಎಆರ್ ವಾಹನವನ್ನು ಪ್ರಹಾಬಲ ಮಜೀದ್ ಹತ್ತಿರ ನಿಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರು ಹೋಳಿ ಆಚರಣೆಯಲ್ಲಿ ಯಾವುದೇ ಡಿಜೆ ಧ್ವನಿವರ್ಧಕಗಳನ್ನು ಬಳಸಬಾರದು. ಅಲ್ಲದೇ, ಬನಾಯೆಂಗೆ ಮಂದಿರ ನಂತಹ ಪ್ರಚೋದನಾಕಾರಿ ಹಾಡುಗಳನ್ನು ಧ್ವನಿವರ್ಧಕಗಳಲ್ಲಿ ಬಳಸಬಾರದು. ಒತ್ತಾಯಪೂರ್ವಕವಾಗಿ ಮಹಿಳೆಯರಿಗೆ ಮತ್ತು ಬೇರೆ ಸಮುದಾಯದವರಿಗೆ ಬಣ್ಣವನ್ನು ಹಚ್ಚಬಾರದು’ ಎಂದು ಎಚ್ಚರಿಸಿದರು.

‘ಕಾಮದಹನ ಮಾಡುವ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಗ್ನಿ ಅನಾಹುತ ಆಗದಂತೆ ಅಗ್ನಿ ಶಾಮಕ ಇಲಾಖೆ ನೋಡಿಕೊಳ್ಳಬೇಕು. ಅದೇ ರೀತಿ ಸಾರ್ವಜನಿಕರು ಕೂಡ ಕಾಮದಹನ ಮಾಡುವ ಸ್ಥಳದಲ್ಲಿ ಮರಳು ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ’ ಎಂದು ಸಲಹೆ ನೀಡಿದರು.

‘ಯಾವುದೇ ಅಹಿತಕರ ಘಟನೆ ಜರುಗುದಂತೆ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾರ್ಚ್‌ 20ರ ಸಂಜೆ 6ರಿಂದ 22ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ರಿಷಿಕೇಶ್ ಭಗವಾನ್ ಮಾತನಾಡಿ,‘ಮಾರ್ಚ್20ರಿಂದ 22ರವರೆಗೆ ನಡೆಯುವ ಹೋಳಿ ಹಬ್ಬವನ್ನು ಶಾಂತಿಯುತ ಆಚರಣೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಲಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಹಿರಿಯರು ತಮ್ಮ ಮಕ್ಕಳಿಗೆ ಯಾರಿಗೂ ತೊಂದರೆಯಾಗದಂತೆ ಬಣ್ಣ ಆಡಲು ತಿಳಿಹೇಳಬೇಕು. ಒಂದು ವೇಳೆ ಶಾಂತಿ ಕದಡಲು ಯತ್ನಿಸಿದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ದಯವಿಟ್ಟು ಇಂತಹ ಸನ್ನಿವೇಶಗಳಿಗೆ ಯಾರೂ ಆಸ್ಪದ ಕೊಡಬಾರದು’ ಎಂದು ಮನವಿ ಮಾಡಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಸಭೆಯ ನಡಾವಳಿ ಓದಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ, ಡಿವೈಎಸ್‌ಪಿ ಯು.ಶರಣಪ್ಪ, ಸುರಪುರ ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ, ತಹಶೀಲ್ದಾರ್ ಶಿವರಾಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.