ADVERTISEMENT

ಹುಣಸಗಿಯಲ್ಲಿ ಕೋರ್ಟ್‌ ಆರಂಭಕ್ಕೆ ಸಿದ್ಧತೆ

ಕಟ್ಟಡ ದುರಸ್ತಿ, ಮೂಲಸೌಲಭ್ಯ ಒದಗಿಸುವ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:31 IST
Last Updated 12 ಡಿಸೆಂಬರ್ 2025, 7:31 IST
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದ ಬಳಿ ಇರುವ ಹಳೇ ಐಬಿಯಲ್ಲಿ ಕೋರ್ಟ್ ಆರಂಭಕ್ಕಾಗಿ ದುರಸ್ತಿ ಕಾರ್ಯ ಭರದಿಂದ ನಡೆದಿರುವುದು
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದ ಬಳಿ ಇರುವ ಹಳೇ ಐಬಿಯಲ್ಲಿ ಕೋರ್ಟ್ ಆರಂಭಕ್ಕಾಗಿ ದುರಸ್ತಿ ಕಾರ್ಯ ಭರದಿಂದ ನಡೆದಿರುವುದು   

ಹುಣಸಗಿ: ತಾಲ್ಲೂಕಿನ ಜನರ ಬಹುವರ್ಷಗಳ ಬೇಡಿಕೆ ಕೋರ್ಟ್ ಆರಂಭಕ್ಕೆ ಶೀಘ್ರ ಕಾಲ ಕೂಡಿ ಬರಲಿದ್ದು, ತಾಲ್ಲೂಕು ಕೇಂದ್ರದ ಹಿರಿಮೆ ಹೆಚ್ಚಲಿದೆ.

ಹಲವು ವರ್ಷಗಳಿಂದಲೂ ಕೋರ್ಟ್ ಆರಂಭಕ್ಕೆ ನ್ಯಾಯಾಧೀಶರು ಬಂದು ಸ್ಥಳ ಪರಿಶೀಲನೆ ಮಾಡುತ್ತಿದ್ದರು. ಆದರೆ ಕೆಲಸ ಆರಂಭಿಸುವಲ್ಲಿ ವಿಳಂಬವಾಗಿತ್ತು. ಈಗ ಇಲ್ಲಿನ ಯುಕೆಪಿ ಕ್ಯಾಂಪ್‌ನ ಹಳೆ ಐಬಿಯಲ್ಲಿ ಕೋರ್ಟ್ ಆರಂಭಕ್ಕೆ ಸಿದ್ಧತೆ ನಡೆದಿದೆ.

ಕೆಲ ತಿಂಗಳ ಹಿಂದೆ ಪಟ್ಟಣದ ಕೃಷ್ಣಾ ಭಾಗ್ಯಜಲ ನಿಗಮದ ಅಡಿಯಲ್ಲಿರುವ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಕೋರ್ಟ್‌ಗೆ ನೀಡಲಾಗಿತ್ತು. ಬಳಿಕ ಜಿಲ್ಲಾ ನ್ಯಾಯಾಧೀಶರು ಎರಡು ಬಾರಿ ಇಲ್ಲಿಗೆ ಬಂದು ಬಂದು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಕಟ್ಟಡದ ಚಾವಣಿಗೆ ಹಾನಿಯಾಗಿತ್ತು. ಕಟ್ಟಡದ ಬಾಗಿಲು ಕಿಟಿಕಿಗಳು ಕೂಡ ಹಾನಿಗೊಳಗಾಗಿದ್ದವು.

ADVERTISEMENT

ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭವಾಗಿದೆ. ಕಟ್ಟಡದಲ್ಲಿರುವ ಶೌಚಾಲಯ ದುರಸ್ತಿ ಹಾಗೂ ನಾಲ್ಕು ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಲಿವೆ. ಕೋರ್ಟ್‌ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗಲು ಅಗತ್ಯ ಮೂಲಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಎಸ್‌.ಜಿ. ಪಾಟೀಲ ತಿಳಿಸಿದರು.

ಕೋರ್ಟ್ ಕಲಾಪ ನಡೆಯುವ ಕೊಠಡಿ ಹಾಗೂ ಬಾರ್‌ ಕೌನ್ಸಿಲ್‌ ಕೊಠಡಿ ಸೇರಿದಂತೆ ಒಟ್ಟು 8 ಕೊಠಡಿಗಳಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಹೊಸ ವೈರಿಂಗ್‌ ಕಾರ್ಯ ನಡೆದಿದೆ. ಮುಂದುವರಿದು ಯುಪಿಏಸ್‌, ಎಸಿ ಸೌಲಭ್ಯ ಒದಗಿಸಲಾಗುತ್ತಿದೆ. ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣವಾಗಲಿದೆ.

ಹುಣಸಗಿ ತಾಲ್ಲೂಕಿನಲ್ಲಿ ಹುಣಸಗಿ, ಕೊಡೇಕಲ್ಲ, ನಾರಾಯಣಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಮಾರು 87ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ತಾಂಡಾಗಳು ಬರುತ್ತಿದ್ದು, ಈ ಭಾಗದ ಜನರು ತಮ್ಮ ವ್ಯಾಜ್ಯ ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಲು ಹಾಗೂ ನ್ಯಾಯ ಪಡೆದುಕೊಳ್ಳಲು ಸುರಪುರಕ್ಕೆ ತೆರಳುತ್ತಿದ್ದರು. ನಾರಾಯಣಪುರ ಭಾಗದಿಂದ ಸುರಪುರಕ್ಕೆ ಹೋಗಿ ಬರಲು 4–5 ತಾಸು ಬೇಕಾಗುತ್ತಿತ್ತು. ಒಂದು ದಿನ ಪೂರ್ತಿ ಸಮಯ ಹೋಗುತ್ತಿತ್ತು. ಆದರೆ ಪಟ್ಟಣದಲ್ಲಿಯೇ ಕೋರ್ಟ್ ಆರಂಭದಿಂದಾಗಿ ಸಮಯ ಹಾಗೂ ಶ್ರಮ ಎರಡೂ ಉಳಿಯುತ್ತದೆ ಎಂದು‌ ಸಾರ್ವಜನಿಕರು ಹೇಳಿದರು.

ಸುರಪುರದಲ್ಲಿ ಹುಣಸಗಿ ತಾಲ್ಲೂಕಿನಿಂದ ಸಿವಿಲ್‌ ಹಾಗೂ ಅಪರಾಧ ವಿಷಯಕ್ಕೆ ಸಂಬಂಧಿಸಿದಂತೆ ಅಂದಾಜು 1,500ಕ್ಕೂ ಹೆಚ್ಚು ಪ್ರಕರಣಗಳಿಗಾಗಿ ಜನರು ಬರುತ್ತಾರೆ ಎಂದು ಸುರಪುರ ವಕೀಲರ ಸಂಘದ ಉಪಾಧ್ಯಕ್ಷ ಹಣಮಂತ್ರಾಯ ಕಟ್ಟಿಮನಿ ಹಾಗೂ ಹುಣಸಗಿ ವಕೀಲ ಪ್ರಭು ಎಂ. ಕಟ್ಟಿಮನಿ ಹೇಳಿದರು.

ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದ ಬಳಿಯಿರುವ ಹಳೇ ಐಬಿಯಲ್ಲಿ ಕೋರ್ಟ್ ಆರಂಭಕ್ಕಾಗಿ ದುರಸ್ತಿ ಕಾರ್ಯ ಭರದಿಂದ ನಡೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.