ADVERTISEMENT

ಹುಣಸಗಿ ತಾಲ್ಲೂಕಿನಲ್ಲಿದೆ ಭಾಷಾ ಶ್ರೀಮಂತಿಕೆ: ನಿಂಗನಗೌಡ ಪಾಟೀಲ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:35 IST
Last Updated 7 ಜುಲೈ 2025, 5:35 IST
ಹುಣಸಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಹುಣಸಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ಹುಣಸಗಿ: ಹುಣಸಗಿ ತಾಲ್ಲೂಕು ಐತಿಹಾಸಿಕ ಹಿರಿಮೆ ಗರಿಮೆಯೊಂದಿಗೆ ತನ್ನದೇ ಆದ ಭಾಷಾ ಶ್ರೀಮಂತಿಕೆಯನ್ನು ಹೊಂದಿದೆ ಎಂದು ಸಾಹಿತಿ ನಿಂಗನಗೌಡ ಪಾಟೀಲ ಹೇಳಿದರು.

ಹುಣಸಗಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ತನ್ನದೇ ಮಹತ್ವವನ್ನು ಹೊಂದಿರುವ ಕನ್ನಡ ಸಾಹಿತ್ಯವನ್ನು ಇಂದು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡುವ ಮೂಲಕ ಭಾಷಾ ಪ್ರಭುತ್ವ ಸಾಧಿಸಬೇಕು’ ಎಂದರು. ಹಳಗನ್ನಡ, ನಡುಗನ್ನಡ, ಹೊಸ ಕನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ಸಾಹಿತ್ಯದ ಕುರಿತು ವಿವರವಾಗಿ ಮಾತನಾಡಿದರು.

ADVERTISEMENT

‘ಯುವಕರಲ್ಲಿ ಅತಿ ಹೆಚ್ಚು ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಅತಿಯಾದ ಮೊಬೈಲ್ ಬಳಕೆ ಬಿಟ್ಟು ಸಾಹಿತ್ಯ ಕೃತಿಗಳ ಅಧ್ಯಯನದಿಂದ ಮಾನಸಿಕ ತುಮುಲ ಕಡಿಮೆಯಾಗಿ ನೆಮ್ಮದಿಯಿಂದ ಇರಲು ಸಹಕಾರಿಯಾಗುತ್ತದೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಕನ್ನಡ ಭಾಷಾ ವಿಷಯದಲ್ಲಿ ನಮ್ಮ ತಾಲ್ಲೂಕಿನ ಪ್ರತಿಭೆಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಕಳೆದ ಮೂರು ವರ್ಷಗಳಿಂದಲೂ ಗೌರವಿಸುತ್ತಿರುವದು ಸಂತಸ ಕ್ಷಣ. ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಸ್ಫೂರ್ತಿಯಾಗಲಿ’ ಎಂದರು.

ಮುಖಂಡರಾದ ಚಂದ್ರಶೇಖರ ದಂಡಿನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ ಮಾತನಾಡಿ, ಹುಣಸಗಿ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯಿಕ ಚಟುವಟಿಕೆ ನಿರಂತರವಾಗಿ ನಡೆಸಿಕೊಂಡು ಹೋಗಲು ಎಲ್ಲ ಅಗತ್ಯ ನೆರವು ನೀಡುವದಾಗಿ ಹೇಳಿದರು. ಹಾಗೂ ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಸಹಕಾರ ನೀಡುತ್ತಿರುವದಾಗಿ ಹೇಳಿದರು.

ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಚನ್ನಯ್ಯಸ್ವಾಮಿ ಹಿರೇಮಠ, ಬಸವರಾಜ ಸಜ್ಜನ್, ಕೊಡೇಕಲ್ಲ ವಲಯ ಕಸಾಪ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಮಾತನಾಡಿದರು.

ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಭೀಮಶೇನರಾವ್ ಕುಲಕರ್ಣಿ, ಗುಂಡು ಅಂಗಡಿ, ರಮೇಶ ವಾಲಿ, ಬಸವರಾಜ ತೆಗ್ಗೆಳ್ಳಿ, ಶಿವಕುಮಾರ ಬಂಡೋಳಿ, ಬಸವರಾಜ ಅಂಗಡಿ ಸೇರಿದಂತೆ ಇತರರು ಇದ್ದರು. ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸತ್ಕರಿಸಲಾಯಿತು.

ನಾಗನಗೌಡ ಪಾಟೀಲ ನಿರೂಪಿಸಿದರು. ಆನಂದ. ಬಿ ಸ್ವಾಗತಿಸಿದರು. ಕಾಂತೇಶ ಹಲಗಿಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.