ADVERTISEMENT

ಕೃಷ್ಣೆಯಿಂದ ಜೀವನ ಮಟ್ಟ ಸುಧಾರಣೆ: ಹುಚ್ಚೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:06 IST
Last Updated 6 ಜುಲೈ 2025, 7:06 IST
ಹುಣಸಗಿ ತಾಲ್ಲೂಕಿನ ನಾರಾಯಣಪುರದ ಛಾಯಾ ಭಾಗವತಿ ಕ್ಷೇತ್ರದ ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕೃಷ್ಣೆಗೆ ಬಾಗಿನ ಅರ್ಪಿಸಲಾಯಿತು
ಹುಣಸಗಿ ತಾಲ್ಲೂಕಿನ ನಾರಾಯಣಪುರದ ಛಾಯಾ ಭಾಗವತಿ ಕ್ಷೇತ್ರದ ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕೃಷ್ಣೆಗೆ ಬಾಗಿನ ಅರ್ಪಿಸಲಾಯಿತು    

ಹುಣಸಗಿ: ತಾಯಿ ಕೃಷ್ಣೆಯ ಕೃಪೆಯಿಂದ ಸುಮಾರು 5 ಜಿಲ್ಲೆಗಳ ರೈತರ ಜೀವನ ಮಟ್ಟ ಸುಧಾರಿಸುವಂತಾಗಿದೆ ಎಂದು ಗುಳಬಾಳ ಆನಂದಾಶ್ರಮದ ಮರಿ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ಛಾಯಾ ಭಗವತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಕೃಷ್ಣೆಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಬಸವಸಾಗರ ಜಲಾಶಯ ನಿರ್ಮಾಣಕ್ಕೂ ಮುನ್ನ ಈ ಭಾಗದಲ್ಲಿ ಬಹುತೇಕ ಬೆಳೆ ಇಲ್ಲದೆ ಜಮೀನುಗಳು ಭಣಗುಡುತ್ತಿದ್ದವು. ಜಲಾಶಯ ನಿರ್ಮಾಣದ ಬಳಿಕ ಕಾಲುವೆಯ ಮೂಲಕ ಕೃಷ್ಣೆ ರೈತರ ಜಮೀನು ತಲುಪಿದ್ದರಿಂದ ಈ ಭಾಗದಲ್ಲಿ ಚಿನ್ನದಂತ ಬೆಳೆ ಕೈಗೆ ಬರುತ್ತಿದೆ. ಇದನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ನಗನೂರು ಮಾತನಾಡಿ, ‘ನಾರಾಯಣಪುರ ಹಾಗೂ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣದ ಬಳಿಕ ಅಸಂಖ್ಯಾತ ರೈತರ ಜಮೀನುಗಳು ಮುಳುಗಡೆಯಾಗಿವೆ. ಆದ್ದರಿಂದ ಆ ಎಲ್ಲಾ ರೈತರನ್ನು ನೆನೆಯುತ್ತಾ ಕೃಷ್ಣೆಗೆ ಬಾಗಿನ ಅರ್ಪಿಸುತ್ತಿದ್ದೇವೆ. ಆ ರೈತರ ತ್ಯಾಗದ ಫಲವೇ ಇಂದು ನಾವು ನೆಮ್ಮದಿಯಿಂದ ಊಟ ಮಾಡುವಂತಾಗಿದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಕೂಡ ಜೀವನಾಡಿಯಾಗಿರುವ ಕೃಷ್ಣೆ ನೀರನ್ನು ಎಲ್ಲ ರೈತರು ಹಿತವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವ ಮೂಲಕ ಭೂಮಿಯ ಸತ್ವವನ್ನು ಕಾಪಾಡಿಕೊಳ್ಳೋಣ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಪುರೋಹಿತರಾದ ಚಿದಂಬರ ಭಟ್ ಜೋಶಿ, ಸಂಘದ ಶಂಕರ ನಾಯಕ್ ದೇವೇಂದ್ರ ಗೌಡ ಮಾಲಗತ್ತಿ, ಸಂಗೀತಾ ಶಹಾಪುರ ನಿರ್ಮಲಾ ಶಹಾಪುರ, ಸತೀಶ್ ರಸ್ತಪೂರ, ಈರಸಂಗಪ್ಪ ಕೊಡೆಕಲ್ಲ, ದ್ಯಾಮಣ್ಣ ರಾಯನಪಾಳ್ಯ ಅಮರೀಶ್ ಅರಕೇರಾ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.