ADVERTISEMENT

₹ 20 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ: ಸಚಿವ ದರ್ಶನಾಪುರ

ಐಡಿಎಸ್ಎಂಟಿ ನೂತನ ಬಡಾವಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:31 IST
Last Updated 20 ಜುಲೈ 2024, 15:31 IST
ಶಹಾಪುರ ನಗರದ ಐಡಿಎಸ್‌ಎಂಟಿ ಯೋಜನೆ ಅಡಿ ಶನಿವಾರ ನೂತನವಾಗಿ 84 ನಿವೇಶನಗಳ ಲೇ ಔಟ್ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಪೌರಾಯುಕ್ತ ರಮೇಶ ಬಡಿಗೇರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಉಪಸ್ಥಿತರಿದ್ದರು
ಶಹಾಪುರ ನಗರದ ಐಡಿಎಸ್‌ಎಂಟಿ ಯೋಜನೆ ಅಡಿ ಶನಿವಾರ ನೂತನವಾಗಿ 84 ನಿವೇಶನಗಳ ಲೇ ಔಟ್ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಪೌರಾಯುಕ್ತ ರಮೇಶ ಬಡಿಗೇರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಉಪಸ್ಥಿತರಿದ್ದರು   

ಶಹಾಪುರ: ‘ನಗರದಲ್ಲಿ ನೂತನವಾಗಿ ₹ 9.50 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ. ಇನ್ನೂ ಉಳಿದ ಹಣವನ್ನು ಬೇರೆ ಇಲಾಖೆಯ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ₹20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಐಡಿಎಸ್ಎಂಟಿ ಯೋಜನೆಯಡಿ ಹೊಸದಾಗಿ ನಿರ್ಮಿಸಿದ 84 ನಿವೇಶನಗಳ ಬಡಾವಣೆಯನ್ನು  ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ 4 ಎಕರೆ ಜಮೀನಿನಲ್ಲಿ ಜಾಗ ಗುರುತಿಸಿದೆ. ಶಿಕ್ಷಣ ಇಲಾಖೆಯಿಂದ ಕಂದಾಯ ಇಲಾಖೆಗೆ ಜಮೀನು ಹಸ್ತಾಂತರ ಪ್ರಕ್ರಿಯೆ ಮುಗಿದ ತಕ್ಷಣ ಟೆಂಡರ್ ಪ್ರಕ್ರಿಯೆ ನಡೆಯಲಿದೆ’ ಎಂದರು.

ADVERTISEMENT

‘ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆ (ಐಡಿಎಸ್ಎಂಟಿ) ಅಡಿ 84 ನಿವೇಶನಗಳ ನೂತನ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಕೋಟ್ಯಂತರ ಮೌಲ್ಯದ ಸರ್ಕಾರದ ಆಸ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಹಾಗೂ ಆಶ್ರಯ ಸಮಿತಿಯು ತುಂಬಾ ಶ್ರಮ ವಹಿಸಿದೆ’ ಎಂದು  ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದದಲ್ಲಿ ಐಡಿಎಸ್ಎಂಟಿ ಯೋಜನೆ ಅನುಷ್ಠಾನಕ್ಕಾಗಿ 1985ರಲ್ಲಿ 94 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 11 ಎಕರೆ ಜಮೀನು ಹಾಗೆ ಉಳಿದುಕೊಂಡಿತ್ತು. ಅದನ್ನು ಪತ್ತೆ ಹಚ್ಚಿ ಸದ್ಯಕ್ಕೆ 7.8 ಎಕರೆ ಜಮೀನಿನಲ್ಲಿ 84 ನಿವೇಶನಗಳನ್ನು ಗುರುತಿಸಿದೆ. ಇನ್ನೂಳಿದ ಜಮೀನಿನಲ್ಲಿ ಮುಂದಿನ ದಿನಗಳಲ್ಲಿ ನಿವೇಶನ ನಿರ್ಮಿಸಲಾಗುವುದು ಎಂದರು.

ಇದೇ ಐಡಿಎಸ್‌ಎಂಟಿಯ ಅಧೀನದ ಇನ್ನುಳಿದ 19 ಮೂಲೆ ನಿವೇಶನ ಹರಾಜು ಮಾಡಲು ಸಿದ್ಧತೆ ನಡೆಸಿದ್ದು, ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಹರಾಜಿನಿಂದ ಬಂದ ಹಣದಿಂದ 80 ಎಕರೆ ಜಮೀನು ಖರೀದಿಸಿ ಆಶ್ರಯ ಮನೆ ನಿರ್ಮಿಸುವ ಗುರಿ ಇದೆ. ಈಗಾಗಲೇ ಹಳೇ ತಹಶೀಲ್ದಾರ್‌ ಕಚೇರಿ ದುರಸ್ತಿಗಾಗಿ ₹ 3 ಕೋಟಿ ಅನುದಾನವಿದೆ. ಉಪ ನೋಂದಣಿ ಕಚೇರಿ, ತಾಯಿ ಮಕ್ಕಳ ಆರೈಕೆ ಕೇಂದ್ರದ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.

ತಹಶೀಲ್ದಾರ ಉಮಾಕಾಂತ ಹಳ್ಳೆ, ಪೌರಾಯುಕ್ತ ರಮೇಶ ಬಡಿಗೇರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ತಿಪ್ಪಣ್ಣ,ಎಂಜಿನಿಯರ್ ನಾನಾಸಾಬ್, ಹರೀಶ ಸಜ್ಜನಶೆಟ್ಟಿ, ಸೈಯದ್ದುದ್ದಿನ ಖಾದ್ರಿ,ಬಸವರಾಜ ಚೆನ್ನೂರ, ಶಾಂತಪ್ಪ ಕಟ್ಟಿಮನಿ, ಸಯ್ಯದ ಮುಸ್ತಾಫ್ ದರ್ಬಾನ್ ರವಿ ಧಣಿ ಭಾಗವಹಿಸಿದ್ದರು.
 

ಹರಾಜಿನ ಮೂಲಕ 16 ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು ಅದರಿಂದ ₹ 2.25 ಕೋಟಿ ಹಣ ಬಂದಿದೆ. ಇದು ಸ್ಥಳೀಯ ಅಭಿವೃದ್ಧಿ ಕೆಲಸಗಳಿಗೆ ಸದ್ಭಳಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ.
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.