ADVERTISEMENT

ಕ್ಷೇತ್ರ ಪುನರ್‌ ವಿಂಗಡಣೆಯಿಂದ ಜಿ.ಪಂ ಕ್ಷೇತ್ರ ಹೆಚ್ಚಳ, ತಾ.ಪಂ ಕ್ಷೇತ್ರ ಇಳಿಕೆ

ಬಿ.ಜಿ.ಪ್ರವೀಣಕುಮಾರ
Published 12 ಫೆಬ್ರುವರಿ 2021, 19:31 IST
Last Updated 12 ಫೆಬ್ರುವರಿ 2021, 19:31 IST
ಯಾದಗಿರಿಯ ಜಿಲ್ಲಾ ಪಂಚಾಯಿತಿ ಕಾರ್ಯಾಲಯ
ಯಾದಗಿರಿಯ ಜಿಲ್ಲಾ ಪಂಚಾಯಿತಿ ಕಾರ್ಯಾಲಯ   

ಯಾದಗಿರಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅವಧಿ ಮುಕ್ತಾಯ ಹಂತಕ್ಕೆ ಬಂದಿದ್ದು, ಚುನಾವಣಾ ಅಯೋಗ ಚುನಾವಣೆ ದೃಷ್ಟಿಯಿಂದ ಕ್ಷೇತ್ರ ಪುನರ್ ವಿಂಗಡಣೆಮಾಡಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್‌ ವಿಂಗಡಣೆಯಿಂದ 6 ಕ್ಷೇತ್ರಗಳು ಹೆಚ್ಚಿದ್ದು, ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳನ್ನು ಇಳಿಕೆ ಮಾಡಲಾಗಿದೆ.ಇದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 30, ತಾಲ್ಲೂಕು ಪಂಚಾಯಿತಿ 75ಕ್ಷೇತ್ರಗಳಿಗೆ ನಿಗದಿ ಮಾಡಲಾಗಿದೆ.

ಈಚೆಗೆ ತಾಲ್ಲೂಕು ಪಂಚಾಯಿತಿಯನ್ನು ರದ್ದು ಮಾಡಿ ಕೇವಲ ಎರಡು ಹಂತದ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಕ್ಷೇತ್ರ ಪುನರ್‌ ವಿಂಗಡಣೆಯಿಂದ ತಾಲ್ಲೂಕು ಪಂಚಾಯಿತಿ ರದ್ದಾಗುವುದಿಲ್ಲ ಎಂದು ರಾಜಕೀಯ ನಾಯಕರ ವಿಶ್ಲೇಷಣೆಯಾಗಿದೆ.

ADVERTISEMENT

2016ರಲ್ಲಿ ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳಾದ ಯಾದಗಿರಿ, ಶಹಾಪುರ, ಸುರಪುರ ಮಾತ್ರ ಇದ್ದವು. ಈಗ ಹೆಚ್ಚುವರಿಯಾಗಿ ಮೂರು ಹೊಸ ತಾಲ್ಲೂಕುಗಳನ್ನು ರಚಿಸಿದ್ದರಿಂದ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗಿದೆ. ಇದು ಆಡಳಿತಾತ್ಮಕ ದೃಷ್ಟಿಯಿಂದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ.

ಮೂರು ತಾಲ್ಲೂಕುಗಳಲ್ಲಿ ತಲಾ 8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದವು. 94 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. ಆದರೆ, ಈಗ 94ರಿಂದ 75ಕ್ಕೆ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಇಳಿಕೆ ಮಾಡಲಾಗಿದೆ. 19 ಕ್ಷೇತ್ರಗಳನ್ನು ಕಡಿಮೆ ಮಾಡಲಾಗಿದೆ.

‘2020ರಲ್ಲಿ ಕೋವಿಡ್‌ ಕಾರಣದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗಿಲ್ಲ. ಇದರಿಂದ ಸರ್ಕಾರ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ₹1 ಕೋಟಿ ನೀಡಿದರೆ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಕಡಿಮೆಯಾಗಲಿದ್ದು, ಇದು ಅಭಿವೃದ್ಧಿಗೆ ಪೂರಕವಾಗಲಿದೆ. ಮೊದಲು 25ರಿಂದ 28 ಹಳ್ಳಿಗಳ ವ್ಯಾಪ್ತಿ ಇರುತ್ತಿತ್ತು. ಈಗ 20ರಿಂದ 21ಕ್ಕೆ ಇಳಿಕೆಯಾಗುವ ಸಂಭವ ಇದ್ದು, ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲಯಡಿಯಾಪುರ.

‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಅನುದಾನ ಕಡಿಮೆ ಇದೆ. ಇದನ್ನು ಹೆಚ್ಚು ಮಾಡಬೇಕು. ಅಧಿಕಾರ ವ್ಯಾಪ್ತಿಯೂ ಹೆಚ್ಚಳ ಮಾಡಿ ಅಧಿಕಾರ ನೀಡಬೇಕು. ಕಳೆದ ಆರ್ಥಿಕ ವರ್ಷದಲ್ಲಿ ₹30 ಲಕ್ಷ ಬಂದಿದೆ. ಈ ಬಾರಿ ಕೇವಲ ₹10 ಲಕ್ಷ ಬಂದಿದೆ. ಹಳ್ಳಿಗಳನ್ನು ಅಭಿವೃದ್ಧಿ ಮಾಡಲು ಹೆಚ್ಚಿನ ಅನುದಾನ ನೀಡಬೇಕು. ತಾಲ್ಲೂಕು ಪಂಚಾಯಿತಿಗಳಿಗೆಅನುದಾನವೇ ಇಲ್ಲದಂತಾಗಿದೆ. ಇದನ್ನು ಬಲಪಡಿಸಬೇಕು. ಆಗ ಮಾತ್ರವೇ ಆಯಾ ಕ್ಷೇತ್ರಗಳು ಅಭಿವೃದ್ಧಿಯಾಗಲು ಸಾಧ್ಯವಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜಶೇಖರಗೌಡ ಪಾಟೀಲ ವಜ್ಜಲ ಅವರು.

––

ಜಿ.ಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ.
-ಬಸನಗೌಡ ಪಾಟೀಲ ಯಡಿಯಾಪುರ, ಜಿ.ಪಂ ಅಧ್ಯಕ್ಷ

––

ಕ್ಷೇತ್ರ ಮರುವಿಂಗಡಣೆ ಮಾಡಿದರೆ ಯಾವುದೇ ಲಾಭವಿಲ್ಲ. ಅಧಿಕಾರ, ಅನುದಾನ ನೀಡಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಬಲಪಡಿಸಬೇಕು.
-ರಾಜಶೇಖರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ

––

2011ರ ಜನಗಣತಿ ಪ್ರಕಾರ ಸರ್ಕಾರ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದೆ. ಜಿಲ್ಲಾ, ತಾ.ಪಂ ಕ್ಷೇತ್ರಗಳಲ್ಲಿ ಮೊದಲಿದ್ದ ಜನಸಂಖ್ಯೆಯನ್ನು ಕ್ಷೇತ್ರವಾರು ಕಡಿಮೆ ಮಾಡಲಾಗಿದೆ.
-ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.