ADVERTISEMENT

ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:56 IST
Last Updated 13 ಆಗಸ್ಟ್ 2019, 14:56 IST
ಸುರಪುರ ಪಟ್ಟಣದ ಎಪಿಎಂಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಿದರು
ಸುರಪುರ ಪಟ್ಟಣದ ಎಪಿಎಂಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಿದರು   

ಯಾದಗಿರಿ: ಪ್ರವಾಹ ಹಿನ್ನೆಲೆಯಲ್ಲಿ ಸುರಪುರ ಎಪಿಎಂಸಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮುಷ್ಟೂರ, ಶೆಳ್ಳಗಿ, ಹೇಮನೂರ, ದೇವಾಪುರ ಗ್ರಾಮಗಳ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ್ ಮಾತನಾಡಿ, ‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮಳೆ ನೀರಿನಿಂದ ಡೆಂಗಿ, ಚಿಕೂನ್‍ಗುನ್ಯಾ, ಮಿದುಳು ಜ್ವರ, ಕಾಮಾಲೆ, ಕಾಲರಾ, ಚರ್ಮರೋಗ ಹರಡುವ ಸಂಭವ ಇರುತ್ತದೆ. ಪ್ರವಾಹವಾದಾಗ ಇಲಿ, ಹೆಗ್ಗಣದಿಂದ ಕಾಯಿಲೆಗಳು ಹರಡುತ್ತವೆ’ ಎಂದು ತಿಳಿಸಿದರು.

‘ಪ್ರವಾಹದಿಂದ ಕಲುಷಿತಗೊಂಡ ನೀರನ್ನು ಯಾವುದಕ್ಕೂ ಉಪಯೋಗಿಸಬಾರದು. ನೀರು ಸಂಗ್ರಹ ತೊಟ್ಟಿಗಳಿಂದ ಅಥವಾ ಶೇಖರಣ ತೊಟ್ಟಿಗಳಿಂದ 10 ರಿಂದ 35 ಅಡಿ ದೂರದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು. ಶೌಚಾಲಯ ನಿರಂತರ ಸ್ವಚ್ಛಗೊಳಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಮಾತನಾಡಿ, ‘ಊಟಕ್ಕೆ ಮೊದಲು ಕೈಗಳನ್ನು ಸೋಪಿನಿಂದ ತೊಳೆಯಬೇಕು. ಕುದಿಸಿ ಆರಿಸಿದ ನೀರು ಕುಡಿಯಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಸೀನುವಾಗ, ಕೆಮ್ಮುವಾಗ, ಮೂಗು-ಬಾಯಿ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು’ ಎಂದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ, ಕಿರಿಯ ಆರೋಗ್ಯ ಸಹಾಯಕ ಭಾಗಪ್ಪ, ತಾಲ್ಲೂಕು ಆರೋಗ್ಯ ಸಿಬ್ಬಂದಿ ಹಾಗೂ ಶ್ರೀರಾಮ ಸೈನ್ಯ ತಂಡದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.