ADVERTISEMENT

ಉಪಚುನಾವಣೆ ಬಂದಾಗ ಬೆದರಿಸುವ ಕೆಲಸ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 16:37 IST
Last Updated 7 ಅಕ್ಟೋಬರ್ 2020, 16:37 IST
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ 
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ    

ಯಾದಗಿರಿ: ‘ಉಪ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ಮಾಡಲಾಗಿದೆ. ಉಪ ಚುನಾವಣೆ ಬಂದಾಗ ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿ ಬೆದರಿಸುವಂತ ಕೆಲಸ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ನಗರದ ಸುಭಾಷ್ ವೃತ್ತದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆದರಿಕೆ ತಂತ್ರಕ್ಕೆ ಯಾರು ಬಗ್ಗುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ವಿರೋಧ ಪಕ್ಷದವರ ಧ್ವನಿ ಅಡಗಿಸಲು ಸಿಬಿಐ ದಾಳಿ ಮಾಡಲಾಗುತ್ತಿದೆ. ಅಲ್ಲದೆ ನಿರಂತರ ಸೇಡಿನ ರಾಜಕಾರಣ ಮಾಡಲಾಗುತ್ತಿದೆ’ ಎಂದು ಆಪಾದಿಸಿದರು.

‘ಬಿಜೆಪಿಯವರು ಚುನಾವಣಾಆಯೋಗ, ಸಿಬಿಐ, ಇ.ಡಿ ಹಾಗೂ ಐ.ಟಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಕೊರೊನಾ ಕಾಲದಲ್ಲಿ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದು ಜಗಜ್ಜಾಹೀರು ಆಗಿದೆ. ಆ ಬಗ್ಗೆ ಅದು ತನಿಖೆ ಮಾಡಲಿ’ ಎಂದರು.

ADVERTISEMENT

ಆರೋಪಿಗಳ ರಕ್ಷಣೆ ಮಾಡುತ್ತಿರುವ ಯೋಗಿ ಸರ್ಕಾರ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ರಕ್ಷಣೆಗೆಸರ್ಕಾರ ನಿಂತಿದೆ. ಯುವತಿಯ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಶವ ಸುಟ್ಟು ಹಾಕಿದ್ದಾರೆ. ಸಾಕ್ಷ್ಯ ನಾಶ ಮಾಡಲು ಸರ್ಕಾರ ಹೊರಟಿದೆ. ಸಾಂತ್ವನ ಹೇಳಲು ಹೋದ ಕಾಂಗ್ರೆಸ್ ನಾಯಕರ ಮೇಲೂಹಲ್ಲೆ ಮಾಡಿದ್ದಾರೆ. ಯುಪಿಯಲ್ಲಿ ಪ್ರಜಾಪ್ರಭುತ್ವದ ರಾಜಕೀಯ ಬದಲು ಗುಂಡಾರಾಜಕೀಯ ನಡೆಯುತ್ತಿದೆ ದೂರಿದರು.

ಜಿಲ್ಲಾ ಯುವ‌ ಕಾಂಗ್ರೆಸ್‌ ಉಪಾಧ್ಯಕ್ಷ ಅವಿನಾಶ ಜಗನ್ನಾಥ, ಬಸವರಾಜ ಪಾಟೀಲ ಬಿಳ್ಹಾರ,ರಾಘವೇಂದ್ರ ಖಾನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.