ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ಧರಾಮ ಹೊನ್ಕಲ್ ಸರ್ವಾಧ್ಯಕ್ಷರಾಗಿ ಆಯ್ಕೆ

ಡಿ.15,16ರಂದು ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 13:43 IST
Last Updated 27 ಅಕ್ಟೋಬರ್ 2018, 13:43 IST
ಸಿದ್ದಪ್ಪ ಹೊಟ್ಟಿ
ಸಿದ್ದಪ್ಪ ಹೊಟ್ಟಿ   

ಯಾದಗಿರಿ: ‘ನಗರದಲ್ಲಿ ಡಿ.15,16ರಂದು ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದ್ದು, ಕಥೆಗಾರ ಸಿದ್ಧರಾಮ ಹೊನ್ಕಲ್‌ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತಿಗಳಾದ ಸುಭಾಶ್ಚಂದ್ರ ಕೌಲಗಿ, ವಿ.ಎಸ್.ಹಿರೇಮಠ, ಡಿ.ಎನ್.ಅಕ್ಕಿ, ಡಾ.ಈಶ್ವರಯ್ಯ ಮಠ, ಗಾಳೆಪ್ಪ ಪೂಜಾರಿ ಅವರ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು. ಸಮ್ಮೇಳನ ಯಾದಗಿರಿ ನಗರದಲ್ಲಿ ನಡೆಯುತ್ತಿರುವುದರಿಂದ ಆಯ್ಕೆಯಲ್ಲಿ ಪ್ರಾದೇಶಿಕ ಆದ್ಯತೆ ನೀಡಬೇಕು ಎಂಬುದಾಗಿಯೂ ಕೇಳಿ ಬಂತು. ಆದರೆ, ಸಮ್ಮೇಳನದಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಹಿನ್ನೆಲೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಶ್ರಮಿಸಿರುವ ಶಹಾಪುರ ತಾಲ್ಲೂಕಿನ ಸಿದ್ಧರಾಮ ಹೊನ್ಕಲ್‌ ಅವರನ್ನು ಅಂತಿವಾಗಿ ಸರ್ವಾಧ್ಯಕ್ಷರ ಸ್ಥಾನಕ್ಕೆ ಕಾರ್ಯಕಾರಿ ಸಮಿತಿ ಆಯ್ಕೆಗೊಳಿಸಿತು’ ಎಂದು ಹೇಳಿದರು.

‘ಸಮ್ಮೇಳನದಲ್ಲಿ ಒಟ್ಟು ಎಂಟು ಕೃತಿಗಳನ್ನು ಹಾಗೂ ಒಂದು ಸ್ಮರಣ ಸಂಚಿಕೆ ಹೊರತರುವ ಉದ್ದೇಶ ಹೊಂದಲಾಗಿದೆ. ಅಖಿಲ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸಲು ₹5 ಲಕ್ಷ ಅನುದಾನ ಒದಗಿಸಿದೆ. ಜಿಲ್ಲೆಯ ನಾಲ್ವರು ಶಾಸಕರಿಗೆ ಅನುದಾನ ಮತ್ತು ನೆರವು ಒದಗಿಸುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸಮ್ಮೇಳನ ಉದ್ಘಾಟನೆಗೆ ರಾಜ್ಯದ ಖ್ಯಾತ ಸಾಹಿತಿಯನ್ನು ಆಹ್ವಾನಿಸಲಾಗುವುದು. ಸಮ್ಮೇಳನದಲ್ಲಿ ವಿಚಾರ ಗೋಷ್ಠಿ, ಕವಿ ಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸ್ಥಳೀಯ ಕವಿ, ಸಾಹಿತಿಗಳಿಗೆ ಗೋಷ್ಠಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಯಾದಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಭೀಮರಾಯ ಲಿಂಗೇರಿ, ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ, ಸುಭಾಶ್ಚಂದ್ರ ಕೌಲಗಿ, ಪ್ರಕಾಶ ಅಂಗಡಿ, ಶ್ರೀನಿವಾಸ ಜಾಲವಾದಿ, ಸಿದ್ಲಿಂಗಣ್ಣ ಆನೆಗುಂದಿ, ಮಹಾದೇವಪ್ಪ ಅಬ್ಬೆತುಮಕೂರು, ಚನ್ನಪ್ಪ ಠಾಣಾಗುಂದಿ, ಬಸವರಾಜ ಚಂಡ್ರಕಿ, ಎಸ್.ಎಸ್‌. ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.