ADVERTISEMENT

‘ಅಧಿಕಾರಿ‌, ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ’

ಗ್ರಾಮ ವಾಸ್ತವ್ಯ; ನೀರು, ಚರಂಡಿ, ವಿದ್ಯುತ್ ಕಂಬ, ಶಿಕ್ಷಕರಿಗಾಗಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 4:26 IST
Last Updated 19 ಜೂನ್ 2022, 4:26 IST
ಗುರುಮಠಕಲ್ ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಇದ್ದಾರೆ
ಗುರುಮಠಕಲ್ ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಇದ್ದಾರೆ   

ಗುರುಮಠಕಲ್: ‘ಪ್ರತಿ ತಿಂಗಳು ಆಯೋಜಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜನರಿಗೆ ಸೌಲಭ್ಯಗಳನ್ನು ತಲುಪಿಸುವುದು, ಕುಂದು-ಕೊರತೆಗಳ ನಿವಾರಣೆ, ಸ್ಥಳದಲ್ಲೆ ಅರ್ಜಿಗಳ ಇತ್ಯರ್ಥದಿಂದಾಗಿ ಸಹಾಯಕವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಶ್ರಮಿಸಿದರೆ ಸರ್ಕಾರದ ಸೌಲಭ್ಯಗಳನ್ನು ಕಟ್ಟ ಕಡೆಯ ಅರ್ಹ ಫಲಾನುಭವಿಗೆ ಸುಲಭವಾಗಿ ತಲುಪಿಸಲು ಸಾಧ್ಯವಾಗುತ್ತದೆ’ ಎಂದು ಶಾಸಕ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ಶನಿವಾರ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಿಂಚಣಿ ಸೌಲಭ್ಯದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ, ಅರಣ್ಯ, ಕೃಷಿ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಸಂಸ್ಥೆಯ ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜವಹಾರನಗರ, ಮಲ್ಲಾಪುರ ಗ್ರಾಮಗಳಿಗೆ ರುದ್ರಭೂಮಿಯನ್ನು ಮಂಜೂರು ಮಾಡಲಾಗಿದೆ, ಜವಹಾರನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ನಿಮ್ಮ ಎಲ್ಲಾ ಸಮಸ್ಯೆಗಳನ್ನೂ ಇಲ್ಲಿ ತಿಳಿಸಬಹುದು. ಸಂಬಂಧಿತ ಇಲಾಖೆಗಳಿಂದ ಜಿಲ್ಲಾ ಹಂತದಿಂದ ಪರಿಷ್ಕರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಹಾಗೂ ನಿಮ್ಮ ಸಮಸ್ಯೆಗಳನ್ನು ಪರಿಷ್ಕರಿಸಲು ಜಿಲ್ಲಾಡಳಿತದಿಂದ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಪರಿಶೀಲನೆ: ನಂತರ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್ ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮದ ವಿವಿಧ ವಾರ್ಡ್, ಅಂಗನವಾಡಿ ಕೇಂದ್ರಗಳು, ಆರೋಗ್ಯ ಕೇಂದ್ರ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಗ್ರಾಮದ ಸ್ವಚ್ಛತೆ ಕಾಯ್ದುಕೊಳ್ಳುವುದು, ಸಿ.ಸಿ.ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಗ್ರಾಮಸ್ಥರು ಮನವಿ ಮಾಡಿದರು, ಅವಶ್ಯಕವಿದ್ದಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಿಸುವುದು ಹಾಗೂ ಸಮರ್ಪಕ ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಪಿಡಿಒ ಅವರಿಗೆ ನಿರ್ದೇಶನ ನೀಡಿದರು.

ವಿವಿಧ ಪಿಂಚಣಿಯ 16, ಮನಸ್ವಿನಿ 1, ಪೌತಿ 9, ಪಹಣಿ 5, ಭೂಮಿ 10, ದೇವಸ್ಥಾನ 2, ಸಿಎಎಲ್ 3, ನೀರು, ಚರಂಡಿ, ರಸ್ತೆ, ವಿದ್ಯುತ್, ಪಡಿತರ, ಶಿಕ್ಷಕ ನಿಯೋಜನೆ ಸೇರಿದಂತೆ ಒಟ್ಟು 83 ಅರ್ಜಿಗಳು ಸ್ವೀಕೃತವಾಗಿದ್ದು, 17 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದು ಕಂದಾಯ ಸಿಬ್ಬಂದಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಗುರುಮಠಕಲ್ ತಹಶೀಲ್ದಾರ್ ಶರಣಬಸವ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸವ ಎಸ್., ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಪಶುಸಂಗೋಪನೆ ಮತ್ತು ಪಶುಪಾಲನೆ ಇಲಾಖೆ ಉಪನಿರ್ದೇಶಕ ರಾಜು ದೇಶಮುಖ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಶಿರಸ್ತೆದಾರ್ ರಾಘವೇಂದ್ರ, ಶರಣಬಸವ, ಕಂದಾಯ ನಿರೀಕ್ಷಕರಾದ ಭೀಮಸೇನರಾವ ಪಾಟೀಲ, ಸುಭಾಶ, ಪಂಪಾಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.