
ಬಾಡಿಯಾಲ (ಸೈದಾಪುರ): ಕಡೇಚೂರು-ಬಾಡಿಯಾಲ ಕೈಗಾರಿಕ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳ ತ್ಯಾಜ್ಯ, ವಿಷಪೂರಿತ ರಾಸಾಯನಿಕಗಳು ಹಳ್ಳದಲ್ಲಿ ಹರಿಸಿದ್ದರಿಂದ ಜಲಚರಗಳು ಮೃತಪಟ್ಟಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳು ರಾತ್ರೋ ರಾತ್ರಿ ತ್ಯಾಜ್ಯದ ನೀರನ್ನು ನೇರವಾಗಿ ಹಳ್ಳಕ್ಕೆ ಹರಿಬಿಟ್ಟು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಇದರಿಂದ ಜಲಮೂಲಗಳು ಕಲುಷಿತವಾಗಿ, ಜಲಚರಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರದ ಹಿಂದೆ ಎರಡ್ಮೂರು ದಿನ ಮಳೆ ಸುರಿದಿತ್ತು. ಆಗ, ಕೆಲವು ಕಾರ್ಖಾನೆಗಳು ಮಳೆ ನೀರಿನ ಜೊತೆಗೆ ವಿಷಪೂರಿತ ತ್ಯಾಜ್ಯ ವಸ್ತುಗಳನ್ನು ನಿಯಮ ಬಾಹಿರವಾಗಿ ಪಕ್ಕದಲ್ಲಿ ಹರಿಯುವ ಹಳ್ಳಕ್ಕೆ ಹರಿಬಿಟ್ಟಿವೆ. ಇದರಿಂದ ಸಾವಿರಾರು ಮೀನುಗಳು ರಾಶಿ ರಾಶಿಯಾಗಿ ಸತ್ತು ನೀರಿನಲ್ಲಿ ತೇಲಿಕೊಂಡು ಬರುತ್ತಿವೆ. ಹುಲ್ಲಿನ ಪೊದೆ, ಗಿಡಗಂಟಿಗಳಲ್ಲಿ ಸತ್ತ ಮೀನುಗಳು ಗುಂಪು ಗುಂಪಾಗಿ ಸಿಲುಕಿಕೊಂಡಿರುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ದೂರಿದರು.
ಹಳ್ಳದಲ್ಲಿ ಮೀನುಗಳು ಸಾವನ್ನಪ್ಪಿದ್ದರಿಂದ ಕೊಳೆತು ದುರ್ವಾಸನೆ ಹಬ್ಬುತ್ತಿದೆ. ಸುತ್ತಲಿನ ಹೊಲಗಳಿಗೆ ಕೃಷಿ ಚಟುವಟಿಕೆಗಳಿಗೆ ಹೋಗುವ ರೈತರು, ಕೂಲಿ ಕಾರ್ಮಿಕರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಳ್ಳದಲ್ಲಿ ರಾಸಾಯಾನಿಕ ತ್ಯಾಜ್ಯ ಸೇರಿದ್ದರಿಂದ ದನಕರುಗಳ ಮಾಲೀಕರಿಗೂ ಆತಂಕವಾಗಿದೆ.
‘ಕಾರ್ಖಾನೆಗಳು ಹೊರಸೂಸುವ ವಿಷಗಾಳಿ, ನೀರಿನಲ್ಲಿ ಮಿಶ್ರಣವಾಗುತ್ತಿರುವ ರಾಸಾಯನಿಕ ಅಂಶಗಳು ಸುತ್ತಲಿನ ಗ್ರಾಮಗಳ ಜನ–ಜಾನುವಾರುಗಳು ಸಾಯಬೇಕೋ, ಬುದುಕಬೇಕೋ ಎನ್ನುವಂತೆ ಆಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಕಡೇಚೂರು ಮತ್ತು ಶೆಟ್ಟಿಹಳ್ಳಿ ಗ್ರಾಮದಲ್ಲಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಬಿಡಲಾಗಿತ್ತು. ಈ ಕುರಿತು ಹಲವು ಬಾರಿ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದರು ಕೂಡ ಕಾರ್ಖಾನೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ಹೊರಹಾಕಿದರು.
ಸ್ಥಳಕ್ಕೆ ಭೇಟಿ ನೀಡಿ ಹಳ್ಳದಲ್ಲಿನ ನೀರಿನ ಮಾಲಿನ್ಯತೆಯನ್ನು ಪರೀಕ್ಷಿಸಿ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದುಆದಮ್ ಸಾಬ್, ಪ್ರಭಾರಿ, ಪರಿಸರ ಅಧಿಕಾರಿ ಯಾದಗಿರಿ
ಇಂತಹ ಘಟನೆ ಸಂಭವಿಸಿದಾಗ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಮಾತು ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿದೆಗುರುರಾಜ ಘಂಟಿ, ಬಾಡಿಯಾಲ ನಿವಾಸಿ
ಬಹುತೇಕ ರಾಸಾಯನಿಕ ಕಾರ್ಖಾನೆಗಳಿದ್ದು ವಿಷಕಾರಿ ಗಾಳಿಯಿಂದ ಉಸಿರಾಡಲು ಕಷ್ಟವಾಗುತ್ತಿದೆ. ಈಗ ಜಲಚರ ಪ್ರಾಣಿಗಳ ಜೀವವನ್ನು ಬಲಿಪಡೆದಿದ್ದು ಮುಂದೆ ನಮ್ಮ ಸರದಿ ಬರಬಹುದುತಿಪ್ಪಣ್ಣ ಭೀಮನಾಯ್ಕ್, ಬಾಡಿಯಾಲ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.