ADVERTISEMENT

ಕಕ್ಕೇರಾ: ಇಂದು ಹೂವಿನ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 5:20 IST
Last Updated 9 ಆಗಸ್ಟ್ 2024, 5:20 IST
ಕಕ್ಕೇರಾ ಪಟ್ಟಣದ ಸಂಗಮೇಶ್ವರ ಮಠ
ಕಕ್ಕೇರಾ ಪಟ್ಟಣದ ಸಂಗಮೇಶ್ವರ ಮಠ   

ಕಕ್ಕೇರಾ: ಪಟ್ಟಣದ ಸಂಗಮೇಶ್ವರ ಮಠದಲ್ಲಿ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ (ಆ 9) ಹೂವಿನ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.

ಮಹಿಳೆಯರು ನಾಗ ಮೂರ್ತಿಗೆ ಹಾಲು ಎರೆಯಲಿದ್ದಾರೆ. ಅನೇಕ ಜನರು ನಾಗದೇವರ ದಾರ ಕಟ್ಟಿಸಿಕೊಳ್ಳುವರು. ಇದರಿಂದ ಇದರಿಂದ ನಾಗದೋಷ ದೂರವಾಗುವಾಗುತ್ತದೆ ಎಂಬ ನಂಬಿಕೆಯಿದೆ.

‘ಬೆಳಿಗ್ಗೆಯಿಂದ ಸಂಜೆ ರಥ ಎಳೆಯುವವರೆಗೂ ಅನೇಕ ಜನರು ನಾಗದೇವರ ದಾರವನ್ನು ಕಟ್ಟಿಸಿಕೊಳ್ಳಲು ಆಗಮಿಸುತ್ತಾರೆ’ ಎಂದು ಮುಖಂಡ ಬಸಣ್ಣ ಕುಂಬಾರ ಹೇಳಿದರು.

ADVERTISEMENT

ಮಠದ ಹಿನ್ನೆಲೆ: ಸಂಗಮೇಶ್ವರ ಮಠದ ಜಾಗದಲ್ಲಿ ಸಂಗಯ್ಯಮುತ್ಯಾ ಎಂಬುವವರು ನೆಲೆಸಿದ್ದರು. ಅವರ ಕಾಲವಾದ ಬಳಿಕ ಸಮಾಧಿ ಮಾಡುವಾಗ ನಿಜಾಮನ ಪ್ರಭಾವ ಇದ್ದಿರಬಹುದು ಎಂಬುದು ಇಲ್ಲಿನ ಹಿರಿಯರ ಮಾತು.

ಮಠದಲ್ಲಿರುವ ಸಂಗಮೇಶ್ವರರ ಗದ್ದುಗೆಗೆ ಹಸಿರು ಬಟ್ಟೆ ಹೊದಿಸಲಾಗಿದೆ. ಮುಸ್ಲಿಂ ಸಮಾಜದ ಸಮಾಧಿ(ಗೋರಿ)ಯಂತೆ ಕಂಡು ಬಂದರೂ ಎಲ್ಲಾ ಜಾತಿ, ಮತ, ವರ್ಗದವರಿಂದ ಪೂಜಿಸಲ್ಪಡುತ್ತಿರುವದರಿಂದ ಈ ಮಠ ಭಾವೈಕ್ಯತೆಯ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಮಾನಯ್ಯ ಪೂಜಾರಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂದೆ ಮಠಕ್ಕೆ ರಾಮಯ್ಯ ತಾತನವರು ಆಗಮಿಸಿದ್ದರು. ಜೀವಿತಾವಧಿಯಲ್ಲಿ ಮಠಕ್ಕೆ ಅಪಾರವಾದ ಕೊಡುಗೆಗಳನ್ನು ನೀಡುವ ಮೂಲಕ ಪ್ರತಿ ವರ್ಷ ಪುರಾಣ, ಪ್ರವಚನಗಳನ್ನು ನಡೆಸಿಕೊಂಡು ಬಂದರು. ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಾಯ, ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕೆಲಸಗಳನ್ನು ಕೈಗೊಂಡು ನವಗ್ರಹ ಸೇರಿದಂತೆ ವಿವಿಧ ದೇವಾಲಯಗಳ ಜತೆ ಕರಿಯಪ್ಪ ತಾತಾನವರ ಮೂರ್ತಿ ಪ್ರತಿಷ್ಠಾಪಿಸಿದರು. ರಾಮಯ್ಯ ತಾತನವರ ಶ್ರಮದಿಂದ ಪ್ರತಿವರ್ಷ ಹೂವಿನ ರಥೋತ್ಸವ ನಡೆಯುತ್ತದೆ.

1998ರಲ್ಲಿ ರಾಮಯ್ಯ ತಾತನವರು ನಿಧನರಾದ ಬಳಿಕ ಮಠದ ಜವಾಬ್ದಾರಿ, ಟ್ರಸ್ಟ್‌ ಅಧ್ಯಕ್ಷತೆಯನ್ನು ಸೀತಾರಾಮನಾಯಕ ಜಹಾಗೀರದಾರ ವಹಿಸಿಕೊಂಡರು. ಅವರ ನೇತೃತ್ವದಲ್ಲಿ ಪ್ರತಿ ವರ್ಷ ರಾಮಯ್ಯತಾತನವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ವಿವಿಧ ಧಾರ್ಮಿಕ ಕಾರ್ಯಗಳು, ನಾಗರ ಅಮವಾಸ್ಯೆಯ 5 ದಿನಗಳ ನಂತರ ಅದ್ದೂರಿಯಾಗಿ ಬೃಹತ್ ಪ್ರಮಾಣದಲ್ಲಿ ಹೂವಿನ ರಥೋತ್ಸವ ಜರುಗುತ್ತದೆ. ತಪ್ಪದೇ ಅಂದು ಮಳೆ ಬರುತ್ತದೆ ಎನ್ನುವುದು ಸ್ಥಳೀಯರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.