ADVERTISEMENT

ಯಾದಗಿರಿ | ಕಲಾ ಪ್ರತಿಭೋತ್ಸವ: ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:13 IST
Last Updated 6 ಡಿಸೆಂಬರ್ 2025, 7:13 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಲಾ ಪ್ರತಿಭೋತ್ಸವದಲ್ಲಿ ನೃತ್ಯದ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಲಾ ಪ್ರತಿಭೋತ್ಸವದಲ್ಲಿ ನೃತ್ಯದ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು   

ಯಾದಗಿರಿ: ಇಲ್ಲಿನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ‘ಮಕ್ಕಳಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸಲು ಕಲಾ ಪ್ರತಿಭೋತ್ಸವ ಆಯೋಜನೆ ಮಾಡಲಾಗಿದೆ. ಸ್ಪರ್ಧೆಗಳಲ್ಲಿ ಮಕ್ಕಳು ಚೆನ್ನಾಗಿ ಪ್ರದರ್ಶನ ನೀಡಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ನಗರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯುವಜನೋತ್ಸವ ಆಯೋಜಿಸಿದ್ದು, ಅಭೂತಪೂರ್ವ ಯಶಸ್ವಿಯಾಗಿದೆ. ಕಲಾ ಪ್ರತಿಭೋತ್ಸವದಲ್ಲಿ ಜಿಲ್ಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ವಿಭಾಗೀಯ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಬೆಳೆದರು ಮುಂದಿನ ಆರೇಳು ವರ್ಷಗಳಲ್ಲಿ ಮತ್ತೊಂದು ಉತ್ಸವನ್ನು ಆಯೋಜನೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಕಲಾ ಪ್ರತಿಭೋತ್ಸವದಲ್ಲಿ ಇನ್ನಷ್ಟು ಮಕ್ಕಳು ಭಾಗವಹಿಸಬೇಕಿತ್ತು. ಪ್ರಚಾರದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳು ಬಂದಿಲ್ಲ. ಇಂತಹ ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಾತನಾಡಿ, ‘2012ರಲ್ಲಿ ನಿಲುಗಡೆಯಾಗಿದ್ದ ಬಾಲ ಪ್ರತಿಭೋತ್ಸವ ಮತ್ತೆ ಆರಂಭವಾಗಿದೆ. ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಯ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ಕಲಬುರಗಿ ವಿಭಾಗ ಮಟ್ಟದಲ್ಲಿ ಪಾಲ್ಗೊಳ್ಳುವರು. ಅಲ್ಲಿ ಗೆದ್ದವರು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸುವರು’ ಎಂದರು.

ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಮಾತನಾಡಿ, ‘ಮಕ್ಕಳಲ್ಲಿನ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಇಂತಹ ಉತ್ಸವ ಸಹಾಯಕ ಆಗತ್ತವೆ. ಮಕ್ಕಳು ಮತ್ತು ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸಗಳು ಇನ್ನಷ್ಟು ಆಗಬೇಕಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ತೀರ್ಪುಗಾರರಾದ ಸಂಗೀತಾ, ಗುರುದೇವಿ, ಲಕ್ಷ್ಮಿದೇವಿ, ಅಮ್ಮಯ್ಯ, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.