ADVERTISEMENT

ವಿಧಾನ ಪರಿಷತ್‌ ಚುನಾವಣೆ: ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರೇ ನಿರ್ಣಾಯಕ

ಬಹಿರಂಗ ಪ್ರಚಾರ ಸಭೆ ಆಯೋಜನೆ

ಬಿ.ಜಿ.ಪ್ರವೀಣಕುಮಾರ
Published 27 ನವೆಂಬರ್ 2021, 4:34 IST
Last Updated 27 ನವೆಂಬರ್ 2021, 4:34 IST
ಡಾ.ಶರಣಭೂಪಾಲರಡ್ಡಿ
ಡಾ.ಶರಣಭೂಪಾಲರಡ್ಡಿ   

ಯಾದಗಿರಿ: ಡಿಸೆಂಬರ್ 10ಕ್ಕೆ ವಿಧಾನ ಪರಿಷತ್‌ (ಸ್ಥಳೀಯ ಸಂಸ್ಥೆ) ಚುನಾವಣೆ ದಿನ ನಿಗದಿಯಾಗಿದ್ದು, ಇದರಲ್ಲಿ ಪ್ರಮುಖವಾಗಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.

ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 2,458 ಮತದಾರರು ಇದ್ದು, ಅದರಲ್ಲಿ 1,141 ಪುರುಷ ಮತದಾರರು, 1,317 ಮಹಿಳಾ ಮತದಾರರು ಇದ್ದಾರೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಅವರು ಯಾರಿಗೆ ಹೆಚ್ಚು ಮತ ಹಾಕುತ್ತಾರೊ ಅವರೆ ಜಯಶಾಲಿಗಳಾಗುತ್ತಾರೆ.

ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಮತಕ್ಷೇತ್ರದ ಚುನಾವಣೆಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಮತ್ತು ನಾಮ ನಿರ್ದೇಶಿತ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತದಾರರಾಗಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳ ಶಾಸಕರು, ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 116 ಸದಸ್ಯರು, 19 ನಾಮನಿರ್ದೇಶಿತ ಸದಸ್ಯರು, 2,315 ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಲಬುರಗಿ, ಯಾದಗಿರಿ ಸಂಸದರು ಮತ ಚಲಾಯಿಸುವ ಹಕ್ಕು ಉಳ್ಳವರಾಗಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ 50ರಷ್ಟು ಮೀಸಲಾತಿ ಇರುವುದರಿಂದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮೀಸಲು ಕ್ಷೇತ್ರ ಮಾಡಿದ್ದರಿಂದಲೂ ಪುರುಷರು ಆಯ್ಕೆಯಾಗಿದ್ದರೂ ಮಹಿಳೆಯರೇ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್‌ (ಸ್ಥಳೀಯ ಸಂಸ್ಥೆ) ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಅಭ್ಯರ್ಥಿ ಎಷ್ಟು ಬೇಕಾದರೂ ವೆಚ್ಚ ಮಾಡಿದರೂ ಮತದಾನದ ದಿನ ಏನೂ ಬೇಕಾದರೂ ಆಗಬಹುದು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ನಮ್ಮ ಅಭ್ಯರ್ಥಿ ಪರವಾಗಿ ಮತ ನೀಡುವಂತೆ ಮನವಿ ಮಾಡುತ್ತೇವೆ. ನಮ್ಮ ಅಭ್ಯರ್ಥಿ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಮತ್ತೊಮ್ಮೆ ಅವರೇ ಜಯ ಸಾಧಿಸಲಿದ್ದಾರೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ.

‘ಬಿಜೆಪಿಯವರು ಹಣ ಬಲದಿಂದ ಗೆಲ್ಲುತ್ತೇನೆ ಅಂದು ಕೊಂಡಿರಬಹುದು. ಗುರುಮಠಕಲ್‌ ಮತಕ್ಷೇತ್ರದ 32 ಗ್ರಾಮ ಪಂಚಾಯಿತಿಗಳಲ್ಲಿ 25 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಇದ್ದಾರೆ. ಹಾನಗಲ್‌ ಮತ್ತು ಮಸ್ಕಿ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ತಿರಸ್ಕರಿಸಿದ್ದಾರೆ. ಸದ್ಯಕ್ಕೆ ನಾವು ತಟಸ್ಥವಾಗಿದ್ದೇವೆ. ಮುಂದೆ ಯಾರಿಗೆ ಬೆಂಬಲ ನೀಡಬೇಕು ಎನ್ನುವುದನ್ನು ಚರ್ಚಿಸುತ್ತೇವೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ನಾಗನಗೌಡ ಕಂದಕೂರ ಹೇಳುತ್ತಾರೆ.

ಈಚೆಗೆ ಗುರುಮಠಕಲ್‌ನಲ್ಲಿ ನಡೆದ ಸಮಾವೇಶದಲ್ಲೂ ಜೆಡಿಎಸ್ ಮುಖಂಡರು ವರಿಷ್ಠರ ಆದೇಶ ಬರುವವರೆಗೂ ಕಾಯಬೇಕು. ಆದೇಶ ಬಂದ ಮೇಲೆ ಯಾರಿಗೆ ಬೆಂಬಲಿಸಬೇಕು ಎಂದು ನೋಡೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದರು.

‘ಪಕ್ಷದ ಅಭ್ಯರ್ಥಿ ದುರ್ಬಲ ಎನ್ನುವ ಪ‍್ರಶ್ನೆ ಇಲ್ಲ. ಯುವಕರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ 6 ವರ್ಷಗಳ ಕಾಲ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಮತದಾರರು ನಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸುತ್ತಾರೆ‘ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ವಿಶ್ವಾಸ ವ್ಯಕ್ತ‍ಪಡಿಸುತ್ತಾರೆ.

***

ನಾಯಕರಿಂದ ಮತಯಾಚನೆ

ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರು ಗ್ರಾಮ ಪಂಚಾಯಿತಿ ಸದಸ್ಯರ ಮತಬೇಟೆಗೆ ಇಳಿದಿದ್ದಾರೆ. ಬಿಜೆಪಿ ಯಾದಗಿರಿ ಮತಕ್ಷೇತ್ರದಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು.

ವಡಗೇರಾ, ಮದರಕಲ್‌, ದೋರನಹಳ್ಳಿ, ಯಾದಗಿರಿಯಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ಕಾಂಗ್ರೆಸ್‌ನಿಂದ ಗುರುಮಠಕಲ್‌ ನಲ್ಲಿ ಸಭೆ ಕರೆಯಲಾಗಿದೆ. ಮುಖಂಡರು ಗ್ರಾ.ಪಂಸದಸ್ಯರನ್ನು ಭೇಟಿಯಾಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಅವರು ಡಿ.1ರಿಂದ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ಅಭ್ಯರ್ಥಿ ಬಿ.ಜಿ.‍ಪಾಟೀಲ ಮತಯಾಚನೆ ಶುರುಮಾಡಿದ್ದು, ಈಗಾಗಲೇ ಕಲಬುರಗಿ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿದ್ದಾರೆ. ಶುಕ್ರವಾರ ಜಿಲ್ಲೆಗೆ ಆಗಮಿಸಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

***

ಶೇ 90ರಷ್ಟು ಗ್ರಾಮ ಪಂಚಾಯಿತಿ ಸದಸ್ಯರೇ ಮತದಾರರಾಗಿದ್ದಾರೆ. ಕೇಂದ್ರ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇರುವುದರಿಂದ ನಮ್ಮ ಅಭ್ಯರ್ಥಿಗೆ ಮತ ಹಾಕಲಿದ್ದಾರೆ
ಡಾ.ಶರಣಭೂಪಾಲರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಮತದಾರರು ಒಮ್ಮೆ ಮೋಸ ಹೋಗಿದ್ದಾರೆ. ಈ ಬಾರಿ ಮೋಸ ಹೋಗುವುದಿಲ್ಲ. ಬಿಜೆಪಿ ಸದಸ್ಯರು 6 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ
ಮರಿಗೌಡ ಪಾಟೀಲ ಹುಲಕಲ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

***

ಹೈಕಮಾಂಡ್‌ ತೀರ್ಮಾನದಂತೆ ನಮ್ಮ ನಿಲುವು ಇರಲಿದೆ. ನಮ್ಮ ಅಭ್ಯರ್ಥಿ ಇಲ್ಲದಿರುವುದರಿಂದ ಸ್ಥಳೀಯವಾಗಿ ಪರಿಸ್ಥಿತಿ ಅವಲೋಕಿಸಿ ಬೆಂಬಲ ನೀಡಲಾಗುವುದು
ನಾಗನಗೌಡ ಕಂದಕೂರ, ಶಾಸಕ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.