ಯಾದಗಿರಿಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಸಂಸದ ಜಿ.ಕುಮಾರ್ ನಾಯಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಸಚಿವ ಶರಣಬಸಪ್ಪ ದರ್ಶನಾಪುರ, ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು
ಯಾದಗಿರಿ: ಆಕರ್ಷಕ ಪಥಸಂಚಲನ, ದೇಶಭಕ್ತಿ ಗೀತೆಗಳಲ್ಲಿ ಸೈನಿಕರ ಧೈರ್ಯ, ಕೆಚ್ಚುಗಳ ನೃತ್ಯ ರೂಪಕ, ಬಾಲಮಂದಿರದ ಮಕ್ಕಳ ಮಲ್ಲಗಂಬ ಕಸರತ್ತಿನ ಸಡಗರದೊಂದಿಗೆ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ ಸಮಿತಿ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಲಾಯಿತು. ಪೊಲೀಸ್ ಬ್ಯಾಂಡ್‌ನೊಂದಿಗೆ ವಿವಿಧ ಪೊಲೀಸ್ ತುಕಡಿಗಳು, ಶಾಲಾ ಮಕ್ಕಳ ಪಥಸಂಚಲನ, ಮಲ್ಲಗಂಬ ಪ್ರದರ್ಶನ ನೆರೆದವರನ್ನು ಪುಳಕಗೊಳಿಸಿತು.
ಜಿಲ್ಲಾ ಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ಪಡೆ, ಅರಣ್ಯ ಪಡೆ, ಅಗ್ನಿಶಾಮಕ ಪಡೆ, ಮಹಾತ್ಮ ಗಾಂಧಿ ಶಾಲೆ ಸ್ಕೌಟ್ ತಂಡ, ಆದರ್ಶ ವಿದ್ಯಾಲಯ ಭಾರತ ಸೇವಾದಾಳ, ಸಭಾ ಪ್ರೌಢಶಾಲಾ ತಂಡ ಹಾಗೂ ಪೊಲೀಸ್ ಬ್ಯಾಂಡ್ ತಂಡದವರು ಮೆರುಗು ತುಂಬಿದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ಮಾಡಿ ಭಾಷಣ ಮುಗಿಸುತ್ತಿದ್ದಂತೆ ವಿದ್ಯಾರ್ಥಿಗಳ ನೃತ್ಯ ರೂಪಕ ಮುದ ನೀಡಿತು.
ಕೋಳಿವಾಡದ ಸರ್ಕಾರಿ ಪ್ರೌಢಶಾಲೆ ಹಾಗೂ ಮಹಾತ್ಮ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಿಮಿಕ್ಸ್ ಶೈಲಿಯ ದೇಶಭಕ್ತಿ ಗೀತೆಗಳ ತುಣುಕುಗಳಿಗೆ ಹೆಜ್ಜೆ ಹಾಕುವ ಮೂಲಕ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಮುನ್ನುಡಿ ಹಾಡಿದರು. ‘ಮೇರಾ ಜೂತಾ ಹೇ ಜಪಾನಿ... ದಿಲ್ ಹೈ ಹಿಂದೂಸ್ತಾನಿ’..., ‘ತೇರಿ ಮಿಟ್ಟಿ...’, ಚೆಕ್ ದೇ ಇಂಡಿಯಾ...’ ‘ಜೈ ಹೋ...’ ಹಾಡುಗಳಿಗೆ ಸ್ಟೇಷನ್ ಏರಿಯಾದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಕುಣಿಯುತ್ತಿದ್ದರೆ ನೆರೆದವರು ದೇಶಾಭಿಮಾನದಲ್ಲಿ ತೇಲಿದರು.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಹಿನ್ನೆಲ್ಲೆಯಾಗಿ ಇರಿಸಿಕೊಂಡು ಡಾನ್ ಬಾಸ್ಕೊ ಇಂಗ್ಲಿಷ್ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳ ‘ಸುನೋ ಗೌರ್ ಸೆ ದುನಿಯಾ ವಾಲೋನ್... ಸಬ್ಸೆ ಆಗೇ ಹೋಂಗೆ ಹಿಂದೂಸ್ತಾನಿ...’ ಹಾಡಿನ ನೃತ್ಯ ರೂಪಕ ಆಕರ್ಷವಾಗಿತ್ತು. ಯೋಧರ ವೀರ ಮರಣ, ಹಿಂದೂ– ಮುಸ್ಲಿಂ– ಕ್ರಿಶ್ಚಿಯನ್ ಐಕ್ಯತೆಯ ಧಾರ್ಮಿಕ ಚಿಹ್ನೆಗಳನ್ನು ಬಳಸಿಕೊಂಡು ಉತ್ಸವದ ಸಂಭ್ರವನ್ನು ಇಮ್ಮಡಿಗೊಳಿಸಿದರು.
ಸಾಂಸ್ಕೃತಿಕ ಪ್ರದರ್ಶನದಲ್ಲಿ ಡಾನ್ ಬಾಸ್ಕೋ ಶಾಲೆಗೆ ಪ್ರಥಮ, ಸ್ಟೇಷನ್ ಏರಿಯಾದ ಸರ್ಕಾರಿ ಪ್ರೌಢಶಾಲೆಗೆ ದ್ವಿತೀಯ ಬಹುಮಾನ ನೀಡಲಾಯಿತು. ಕೋಳಿವಾಡದ ಸರ್ಕಾರಿ ಪ್ರೌಢಶಾಲೆ ಹಾಗೂ ಮಲ್ಲಗಂಬ ತಂಡಕ್ಕೆ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಿಗೂ ಬಹುಮಾನ ವಿತರಿಸಲಾಯಿತು.
ಸ್ವಚ್ಛ ಭಾರತ ಹಿ ಸೇವಾ ಹಾಗೂ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಜಿ.ಕುಮಾರ್ ನಾಯಕ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.