
ಯಾದಗಿರಿ: ‘ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕ ಸಾಧನೆಗಳ ಬಗೆಗಿನ ಕನಕದಾಸರ ತತ್ವೋಪದೇಶಗಳು ಚಿರಂತನವಾಗಿದ್ದು, ನಮ್ಮ ಬದುಕಿಗೆ ದಾರಿ ದೀಪವಾಗಿವೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸಂತ ಕವಿ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನಕದಾಸರು ಕನ್ನಡ ಸಾಹಿತ್ಯ ಲೋಕಕ್ಕೆ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ನೀಡಿದ್ದಾರೆ. ಸಂಗೀತ ಜಗತ್ತಿಗೆ ತಮ್ಮದೆಯಾದ ಕೊಡುಗೆಗಳನ್ನು ಮಂಡಿಗೆಗಳ ರೂಪದಲ್ಲಿ ಅರ್ಪಿಸಿದ್ದಾರೆ’ ಎಂದರು.
‘ಸಂತರೆಂದರ ಲೋಕಕ್ಕೆ ಆಧ್ಯಾತ್ಮಿಕತೆಯ ಪರಿಮಳ ಬೀರಿ, ದೈವತ್ವವನ್ನು ಪಡೆದವರು. ಇಂತಹ ಅಪರೂಪದ ಚೇತನಗಳ ಸಾಲಿಗೆ ಕನಕದಾಸರು ಸಹ ಸೇರಿದ್ದಾರೆ. ಅವರ ತತ್ವ, ಆದರ್ಶ, ಅವರು ಬೀರಿದ ಬೆಳಕು ನಮ್ಮನ್ನು ಸದಾ ಮುನ್ನಡೆಸುತ್ತದೆ. ಕನಕದಾಸರ ತತ್ವಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು’ ಎಂದು ಹೇಳಿದರು.
‘ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರು ಕನಕದಾಸರ ಮೂರ್ತಿಯ ನವೀಕರಣಕ್ಕೆ ₹ 35 ಲಕ್ಷ ಅನುದಾನ, ಜಿಲ್ಲಾ ಕೇಂದ್ರದಲ್ಲಿ ಕನಕ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ನೀಡುವಂತೆ ಕೇಳಿದ್ದಾರೆ. ಜಿಲ್ಲಾಡಳಿತ ನಿವೇಶನ ಗುರುತಿಸಿದರೆ ಭವನ ನಿರ್ಮಾಣ ಹಾಗೂ ಮೂರ್ತಿ ನವೀಕರಣಕ್ಕೆ ಅಗತ್ಯ ಸಹಕಾರ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ‘ಸಮಾಜದ ಪರಿವರ್ತನೆಗಾಗಿ ತಮ್ಮ ಜೀವನವನ್ನೇ ಸವೆಸಿದ ಮಹಾನ್ ಪುರಷರನ್ನು ಒಂದು ಜಾತಿಗೆ ಸೀಮಿತವಾಗಿ ನೋಡುವುದು ಸರಿಯಲ್ಲ. ಮಹಾನ್ ನಾಯಕರು ತಾವು ಕಂಡ ಕನಸುಗಳನ್ನು ನನಸು ಮಾಡಲು ಸಾಕಷ್ಟು ದುಡಿದಿದ್ದಾರೆ. ಅವರೆಲ್ಲರಿಗೂ ಗೌರವ ಕೊಡಬೇಕು’ ಎಂದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಸಾಬಣ್ಣ ಜುಬೇರಿ, ‘ಕನಕದಾಸರ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳಂತಹ ವೈವಿಧ್ಯಮಯ ಸಾಹಿತ್ಯದಿಂದ ಕನ್ನಡವನ್ನು ಶ್ರೀಮಂತಗೊಳಿಸಿವೆ. ತಮ್ಮ ಸಾಹಿತ್ಯದ ಕೊಡುಗೆಯಿಂದಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾರೆ’ ಎಂದರು.
‘ಕನಕದಾಸರು ಇದ್ದದ್ದನ್ನು ಇದ್ದಂತೆ ಹೇಳಿ ಸಮಾಜದ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದರು. ರಾಮಧಾನ್ಯ ಚರಿತ್ರೆಯಲ್ಲಿ ಭತ್ತ ಮತ್ತು ರಾಗಿಯ ಮೂಲಕ ಬಡವ ಮತ್ತು ಶ್ರೀಮಂತರ ನಡುವಿನ ಅಂತರದ ಬಗ್ಗೆ ಹೇಳಿ, ನಮ್ಮ ಸಂಸ್ಕೃತಿಯ ಚರಿತ್ರೆಯನ್ನು ಎತ್ತಿಹಿಡಿದಿದ್ದಾರೆ’ ಎಂದರು.
ತಿಂಥಿಣಿ ಕನಕಗುರು ಪೀಠದ ಸಿದ್ಧರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಹೆಚ್ಚುವರಿ ಎಸ್‌ಪಿ ಧರಣೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಣ್ಣ ಐಕೂರು ಸೇರಿ ಹಲವರು ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ
ಕನಕದಾಸರ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ತಮಟೆ ನಾದನಕ್ಕೆ ಲಂಬಾಣಿ ಮಹಿಳಾ ಕಲಾವಿದರು ಗೊಂಬೆ ವೇಷಧಾರಿಗಳು ನೃತ್ಯ ಮಾಡಿದರು. ಮೆರವಣಿಗೆಯು ಸೇಡಂ ರಸ್ತೆಯ ಮೂಲಕ ಪದವಿ ಮಹಾವಿದ್ಯಾಲಯ ಬಂದು ತಲುಪಿತು. ಸಮಾಜದ ಮುಖಂಡರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಮುಖಂಡರಿಂದ ಗೌರವ: ಕನಕದಾಸರ ಜಯಂತಿ ಅಂಗವಾಗಿ ಬಿಜೆಪಿ ಜಿಲ್ಲೆಯ ಮುಖಂಡರು ಕನಕದಾಸರ ವೃತ್ತಕ್ಕೆ ತೆರಳಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಪರಿವರ್ತನೆಯ ಹರಿಕಾರ’
‘ಕನಕದಾಸರು ತಮಗೆ ದೊರೆತ ಸಂಪತ್ತನ್ನು ಬಡವರಿಗೆ ಹಂಚಿದರು. ಜಾತಿರಹಿತ ಸಮಾಜ ನಿರ್ಮಾಣದ ಕನಸು ಕಂಡಿದ್ದು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದ ಪರಿವರ್ತನೆಯ ಹರಿಕಾರ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ‘ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಅವರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ’ ಎಂದರು. ಮುಖಂಡರಾದ ಮಹೇಶರೆಡ್ಡಿ ಮುದ್ನಾಳ ದೇವಿಂದ್ರನಾಥ ನಾದ ವೆಂಕಟರೆಡ್ಡಿ ಅಬ್ಬೆತೂಮಕುರ ದೇವಿಂದ್ರಪ್ಪ ಕೋನೇರ ಮಲ್ಲಿಕಾರ್ಜುನ ಹೋನಿಗೇರಿ ಶ್ರೀಧರ ಆರ್.ಸಾಹುಕಾರ ವೀಣಾ ಮೋದಿ ಸುನಿತಾ ಚವ್ಹಾಣ್ ಸ್ವಾಮಿದೇವ ದಾಸನಕೇರಿ ರಾಜಶೇಖರ್ ಕಾಡಂನೊರ ರಾಮು ರಾಠೋಡ ನಾಗಪ್ಪ ಬೇನಕಲ್ ಮೌನೇಶ್ ಬೆಳಗೇರಾ ಭೀಮಬಾಯಿ ಶೇಂಡಿಗಿ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.