
ಸುರಪುರ: ‘ಕಣ್ಣು ಸೂಕ್ಷ್ಮವಾದ ಅಂಗವಾಗಿದ್ದು ಅವುಗಳನ್ನು ಜಾಗೃತವಾಗಿ ಕಾಪಾಡಿಕೊಳ್ಳಬೇಕು. ಕಣ್ಣಿನ ಸಮಸ್ಯೆಗಳಿಗೆ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಲವೀಶ್ ಒರಡಿಯಾ ಹೇಳಿದರು.
ನಗರದ ಸರ್ಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಸಾರ್ವಜನಿಕ ಆಸ್ಪತ್ರೆ ಮತ್ತು ಟಿಎಚ್‍ಒ, ಬೆಂಗಳೂರಿನ ವಿವೇಕಾನಂದ ಸೇವಾಶ್ರಮ ಶಹಾಪುರದ ಶಿವರಾಜ್ ಪಾಟೀಲ್ ಫೌಂಡೇಷನ್, ಜೈನ್ ಸೋಷಿಯಲ್ ಗ್ರೂಪ್ ಸುರಪುರ-ಶಹಾಪುರ ಮತ್ತು ಲಾಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸುರಪುರಕ್ಕೆ ₹ 50 ಲಕ್ಷ ವೆಚ್ಚದ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‍ಐಸಿಯು) ಮಂಜೂರಾಗಿದೆ. ಈ ಯೋಜನೆಯಲ್ಲಿ ವಿಶೇಷ ತಜ್ಞರ ತಂಡ, ಸುಧಾರಿತ ಉಪಕರಣಗಳ ಸೌಲಭ್ಯ ಇರುತ್ತದೆ. ಇದರಿಂದ ಬೇರೆ ಊರುಗಳಿಗೆ ಚಿಕಿತ್ಸೆಗಾಗಿ ಹೋಗುವುದು ತಪ್ಪಿ ಇಲ್ಲಿಯೇ ಮಕ್ಕಳಿಗೆ ಚಿಕಿತ್ಸೆ ಕೊಡಿಸಬಹುದು. ಈ ಆಸ್ಪತ್ರೆಗೆ ಹೆಚ್ಚಿನ ತಜ್ಞ ವೈದ್ಯರನ್ನು ಒದಗಿಸಲಾಗುವುದು’ ಎಂದರು.
ಡಿಎಚ್‍ಒ ಡಾ. ಮಹೇಶ್ ಬಿರಾದಾರ ಮಾತನಾಡಿ, ‘ಕಣ್ಣಿನ ಪೊರೆ ವಯಸ್ಸಾದ ನಂತರ ಪ್ರತಿಯೊಬ್ಬರಿಗೂ ಸಹಜವಾಗಿ ಬರುತ್ತದೆ. ಆಗ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಅವರಿಗೆ ಜೀವನದಲ್ಲಿ ಹೊಸ ಬೆಳಕನ್ನು ಕೊಡುವ ಕೆಲಸ ಮಾಡುವುದು ಪುಣ್ಯದ ಕೆಲಸ’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಮಾತನಾಡಿ, ‘ನಮ್ಮ ಇಲಾಖೆ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರದಂದ ಕಳೆದ 10 ವರ್ಷಗಳಿಂದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸುತ್ತಿದ್ದೇವೆ. ತಾಲ್ಲೂಕು ಆಸ್ಪತ್ರೆಯಲ್ಲಿ ತಾಯಿ-ಮಗುವಿನ ಆರೈಕೆ, ಸಿಟಿ ಸ್ಕ್ಯಾನ್, ಎಕ್ಸರೆ, ಡಯಾಲಿಸಿಸ್ ಸೇರಿ 30-40 ಸೇವೆಗಳಿವೆ’ ಎಂದರು.
ಡಿಎಲ್‍ಒ ಪರಮಾನಂದ ಗಾಯಕವಾಡ, ತಾಪಂ ಇಒ ಬಸವರಾಜ ಸಜ್ಜನ್, ಪಂಕಜ್ ಜೋಶಿ, ದೀಪಕ್ ಜೈನ್ ವೇದಿಕೆಯಲ್ಲಿದ್ದರು. ಡಾ. ಪವನಕುಮಾರ ಜೋಶಿ, ಡಾ. ಎಂ.ಎಸ್.ಕನಕರೆಡ್ಡಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಲಾಯನ್ಸ್ ಕ್ಲಬ್, ಸರಾಫ್ ಸಂಘದವರು ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.