ADVERTISEMENT

ಉಚಿತ ಲಸಿಕೆಗೆ ಆಗ್ರಹ: ಏಕಕಾಲಕ್ಕೆ 40 ಸ್ಥಳಗಳಲ್ಲಿ ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:30 IST
Last Updated 10 ಜೂನ್ 2021, 17:30 IST
ಸುರಪುರದ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು  ಪ್ರತಿಭಟನೆ ನಡೆಸಿದರು
ಸುರಪುರದ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು  ಪ್ರತಿಭಟನೆ ನಡೆಸಿದರು   

ಸುರಪುರ: ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಕಾಲಕ್ಕೆ ಕೋವಿಡ್ ಲಸಿಕೆ ಸಿಗಬೇಕು‘ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟಿ ಆಗ್ರಹಿಸಿದರು.

ರಾಜಾದ್ಯಂತ ಕರವೇ ಹಮ್ಮಿಕೊಂಡಿದ್ದ ‘ಬೇಗನೆ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ‘ ಭಾಗವಾಗಿ ಇಲ್ಲಿಯ ಕರವೇ ತಾಲ್ಲೂಕು ಘಟಕ ಗುರುವಾರ ತಹಶೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

'ನಾಡಿನ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಸಿಗಲಿ ಎಂಬ ಉದ್ದೇಶದೊಂದಿಗೆ ಕರವೇ ರಾಜ್ಯ ಘಟಕದ ಅಧ್ಯಕ್ಷ ಟ.ಎ.ನಾರಾಯಣಗೌಡ ಅವರ ಜನ್ಮದಿನದ ನಿಮಿತ್ತ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಅವರ ಆಶಯದಂತೆ ರಾಜಾದ್ಯಂತ ಏಕಕಾಲಕ್ಕೆ ಸಾವಿರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ' ಎಂದರು.

ADVERTISEMENT

ಲಸಿಕೆ ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರ ಹಂಚಿಕೆಯೂ ಸಮಾನತೆಯ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು. ಹೀಗಾಗಿ ಎಲ್ಲ ರಾಜ್ಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆಯಾಗಬೇಕು' ಎಂದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶನಾಯಕ ಬೈರಿಮರಡ್ಡಿ ಮಾತನಾಡಿ, 'ಪ್ರತಿ ಚುನಾವಣೆಗಳ ಸಂದರ್ಭದಲ್ಲಿ ಸ್ಥಾಪಿಸಲಾಗುವ ಮತದಾನದ ಬೂತ್‍ಗಳ ಮಾದರಿಯಲ್ಲಿ ಜನರಿಗೆ ಅತಿ ಹತ್ತಿರದಲ್ಲೇ ಲಸಿಕೆ ಬೂತ್‍ಗಳನ್ನು ಸ್ಥಾಪಿಸಬೇಕು. ಪೋಲಿಯೊ ಮಾದರಿಯಂತೆ ಮನೆ ಮನೆಗೆ ತೆರಳಿ ಲಸಿಕೆ ನೀಡಬೇಕು' ಎಂದು ಒತ್ತಾಯಿಸಿದರು.

'ಪ್ರತಿಭಟನೆಯು ತಾಲ್ಲೂಕಿನಾದ್ಯಂತ 40 ಕಡೆ ಏಕಕಾಲದಲ್ಲಿ ಏರ್ಪಡಿಸಲಾಗಿದೆ. ನಗರದಲ್ಲಿ ತಹಶೀಲ್ದಾರ್ ಕಚೇರಿ, ಗಾಂಧೀಜಿ ವೃತ್ತ, ಹಸನಾಪುರ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ, ಹೋಬಳಿಯಲ್ಲಿ ನಾಡ ಕಚೇರಿ, ಪುರಸಭೆ, ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಗ್ರಾಪಂ ಕಚೇರಿಗಳ ಮುಂದೆ ನಡೆಯುತ್ತಿದೆ' ಎಂದರು.

ಮುಖಂಡರಾದ ವೆಂಕಟೇಶ ಪ್ಯಾಪ್ಲಿ, ಅಂಬ್ಲಯ್ಯ ಬೇಟೆಗಾರ, ಹಣಮಗೌಡ ಶಖಾಪೂರ, ಶ್ರೀನಿವಾಸ ಬೈರಿಮರಡ್ಡಿ, ಹಣಮಂತ, ಸೋಮು ಹಾಲಗೇರಾ, ಆನಂದ ಮಾಚಗುಂಡಾಳ, ಸಾಯಬಣ್ಣ ಬೆಂಕಿ ದೊರೆ, ಅನಿಲ ಬಿರಾದಾರ್, ಶಾಂತಗೌಡ ಬಿರಾದಾರ್, ಆಂಜನೇಯ ದೇವರಗೋನಾಲ, ಅಯ್ಯಪ್ಪ ವಗ್ಗಾಲಿ, ಬಲಭೀಮ ಬೊಮ್ಮನಳ್ಳಿ, ಅರ್ಜುನ ಯಕ್ಷಿಂತಿ, ಮಲ್ಲು ಬನ್ನೆಟ್ಟಿ, ಸಾಯಬಣ್ಣಗೌಡ, ಮಲ್ಲು ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.