ಸುರಪುರ: ‘ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣ ಪಣವಾಗಿಟ್ಟು ನಮ್ಮ ದೇಶವನ್ನು ಕಾಯುತ್ತಿರುವುದರಿಂದಲೇ ನಾವೆಲ್ಲ ಸುರಕ್ಷಿತವಾಗಿದ್ದೇವೆ. ನಾವೆಲ್ಲ ನಮ್ಮ ಯೋಧರಿಗೆ ಗೌರವ ಕೊಡಬೇಕು. ದೇಶಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ಸೇನೆ, ಅರೆಸೇನೆ ಮತ್ತು ಮಾಜಿ ಯೋಧರ ಸಂಘ ಏರ್ಪಡಿಸಿದ್ದ ಕಾರ್ಗಿಲ್ 26ನೇ ವಿಜಯೋತ್ಸವ ಮತ್ತು ಆಪರೇಷನ್ ಸಿಂಧೂರ ಯಶಸ್ವಿ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮ್ಮ ಸೈನಿಕರಿಗೆ ನಾವು ಯಾವುದೇ ನೆರವು ನೀಡಿದರೂ ಕಡಿಮೆ. ಶೀಘ್ರದಲ್ಲಿ ನಗರದ ಸೂಕ್ತ ಸ್ಥಳದಲ್ಲಿ ಯೋಧರ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ’ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಮಾಜಿ ಯೋಧ ಭೀಮಣ್ಣನಾಯಕ ಲಕ್ಷ್ಮೀಪುರ ಮಾತನಾಡಿ, ‘ಕಾರ್ಗಿಲ್ ಕದನ ಮತ್ತು ಆಪರೇಷನ್ ಸಿಂಧೂರ ಈ ಎರಡೂ ನಮ್ಮ ಹೆಮ್ಮೆ. ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತಿದೆ. ನನ್ನ ಏಕೈಕ ಮಗನನ್ನು ಸೇನೆಗೆ ಸೇರಿಸಿದ್ದೇನೆ’ ಎಂದು ಭಾವುಕರಾದರು.
ಮಾಜಿ ಯೋಧ ನಿಂಗಣ್ಣ ಒಂಟೂರ ಚಂದಲಾಪುರ, ತಾವು ಉಗ್ರರ ಜೊತೆಗೆ ಸೆಣಸಾಡಿದ ದೃಶ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಉಪನ್ಯಾಸಕ ರಾಜಶೇಖರ ವಿಭೂತಿ ಕಾರ್ಗಿಲ್ ವಿಜಯೋತ್ಸವ ಮತ್ತು ಆಪರೇಷನ್ ಸಿಂಧೂರ ಯಶಸ್ವಿ ಬಗ್ಗೆ ಮಾತನಾಡಿದರು.
ಕಾರ್ಯಕ್ರಮಕ್ಕೆ ಮೊದಲು ವೇಣುಗೋಪಾಲ ದೇವಸ್ಥಾನ ಆವರಣದಿಂದ ಅಮರ ಜ್ಯೋತಿ ಜವಾನ ಯಾತ್ರೆ ಅರಮನೆ, ಗಾಂಧಿವೃತ್ತ ಮಾರ್ಗವಾಗಿ ಗರುಡಾದ್ರಿ ಕಲಾ ಮಂದಿರ ತಲುಪಿತು.
ಸಂಸ್ಥಾನಿಕ ರಾಜಾ ಲಕ್ಷ್ಮೀನಾರಾಯಣನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ಮುಖಂಡರಾದ ರಾಜಾ ಮುಕುಂದನಾಯಕ, ನಿಂಗರಾಜ ಬಾಚಿಮಟ್ಟಿ, ಶಕೀಲ ಅಹ್ಮದ್ ಖುರೇಶಿ, ದೊಡ್ಡದೇಸಾಯಿ, ಭೀಮನಗೌಡ ಲಕ್ಷ್ಮೀ, ವೆಂಕಟೇಶ ಬೇಟೆಗಾರ, ರಮೇಶ ದೊರೆ, ಮಹಿಬೂಬ ಒಂಟಿ, ಸಚಿನಕುಮಾರ ನಾಯಕ ಇತರರು ಭಾಗವಹಿಸಿದ್ದರು.
ಮಾಜಿ ಯೋಧರಾದ ಭೀಮಣ್ಣನಾಯಕ ಲಕ್ಷ್ಮೀಪುರ, ನಿಂಗಣ್ಣ ಚಂದಲಾಪುರ, ನಿಂಗನಗೌಡ ಬಾದ್ಯಾಪುರ, ಸುರೇಶ ರಾಠೋಡ, ತಿಪ್ಪನಗೌಡ ಬಾದ್ಯಾಪುರ, ಮಲ್ಲಪ್ಪ ಬೆಳಿಗೇರಿ, ಕಾಸೀಂಸಾಬ, ಶ್ರೀನಿವಾಸ ಕಾಮನಟಗಿ, ಶರಣಬಸವ ಹೆಗ್ಗನದೊಡ್ಡಿ, ಮಲ್ಲೇಶ ರುಕ್ಮಾಪುರ, ದೇವಪ್ಪ ರಾಠೋಡ, ಬಸನಗೌಡ ರಾಜನಕೋಳೂರು, ಹಣಮಂತರಾಯ ಗೋಗಿ, ಗುಂಡೂರಾವ ರಾಠೋಡ, ಮಲ್ಲಣ್ಣ ನಡಕೂರ, ವಿಶ್ವನಾಥ ಸುರಪುರ ಅವರನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.