ಕಕ್ಕೇರಾ: ಪಟ್ಟಣದ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ನಿಮಿತ್ತ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಮಂಗಳವಾರ ಸಂಜೆ ಕರಿಯಪ್ಪ ತಾತನವರ ಅದ್ದೂರಿ ರಥೋತ್ಸವ ಜರುಗಿತು.
ಅಲಂಕಾರಗೊಂಡಿದ್ದ ರಥಕ್ಕೆ ನಂದಣ್ಣಪ್ಪ ಪೂಜಾರಿ ಅವರು ಪೂಜೆ ಸಲ್ಲಿಸಿ, ರಥದ ಸುತ್ತ ಕಳಸದೊಂದಿಗೆ 5 ಪ್ರದಕ್ಷಿಣೆ ಹಾಕಿ, ರಥದ ಮೇಲೆ ಕಳಸವನ್ನಿರಿಸುತ್ತಿದ್ದಂತೆ ಭಕ್ತರು ಉದ್ಗರಿಸಿದರು.
ನಂದಣ್ಣಪ್ಪ ಪೂಜಾರಿಯವರು ರಥದ ಮೇಲೆ ಏರಿ ಭಕ್ತರತ್ತ ಬಿಳಿ ವಸ್ತ್ರ ಬೀಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಗಮೇಶ್ವರ ಮಹಾರಾಜಕೀ..ಜೈ...ಕರಿಯಪ್ಪ ತಾತನವರ ಮಹಾರಾಜಕೀ ಜೈ... ರಾಮಯ್ಯತಾತನವರ ಮಹಾರಾಜಕೀ ಜೈ...ಎಂದು ರಥದತ್ತ ಹೂ, ಉತ್ತತ್ತಿ, ಬಾಳೆಹಣ್ಣು ಎಸೆದು ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು. ರಥವು ರಥದ ಪಾದಕಟ್ಟೆ ತಲುಪಿ ಸುರಕ್ಷಿತವಾಗಿ ಸ್ವಸ್ಥಳಕ್ಕೆ ಬಂದು ತಲುಪಿತು.
ಬೆಳಿಗ್ಗೆಯಿಂದ ಭಕ್ತರು ರಾಮಯ್ಯತಾತ, ಕರಿಯಪ್ಪ ತಾತಾ, ಸಂಗಮೇಶ್ವರ ಗದ್ದುಗೆಗೆ, ಕಾಯಿ, ಕರ್ಪೂರ ಸಲ್ಲಿಸಿ, ನಾಗರಮೂರ್ತಿಗೆ ಹಾಲೆರೆದರು. ನಾಗಪಂಚಮಿಯಂದು ಮಠದ ನಾಗದೇವರ ದಾರ ಧರಿಸುವುದರಿಂದ ಸರ್ಪದೋಷದಿಂದ ಮುಕ್ತಿಯಾಗುವ ಪ್ರತೀತಿಯಿದೆ. ಹೀಗಾಗಿ ಭಕ್ತರು, ತಮ್ಮ ಭಕ್ತಿ ಕಾಣಿಕೆ ಸಲ್ಲಿಸಿ, ನಾಗದೇವರ ದಾರ ಪಡೆದು ತಮ್ಮ ಕೈಗಳಿಗೆ ಕಟ್ಟಿಕೊಂಡರು.
ಡೊಳ್ಳಿನ ಪದಗಳನ್ನು ಹಾಡಿ ನೆರೆದ ಭಕ್ತರನ್ನು ರಂಜಿಸಿದರು. ಸೋಮವಾರ ರಾತ್ರಿ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು.
ಅಯ್ಯಣ್ಣ ಪೂಜಾರಿ, ಮಾನಯ್ಯ ಪೂಜಾರಿ, ಹಣಮಂತ್ರಾಯ ಜಹಾಗೀರದಾರ, ಷಣ್ಮುಖಯ್ಯ ಹಗರಟಗಿ, ಗುಂಡಪ್ಪ ಸೊಲಾಪುರ, ದಸ್ತಗೀರಸಾಬ ಶ್ಯಾನಿ ಪೂಜಾರಿ, ರಾಜು ಹವಾಲ್ದಾರ, ಗುತ್ತಯ್ಯಸ್ವಾಮಿ, ಪರಮಣ್ಣ ಕುಂಬಾರ, ದೇವಿಂದ್ರಪ್ಪ ಬಳಿಚಕ್ರ, ರಮೇಶಶೆಟ್ಟಿ, ಗುಡದಪ್ಪ ಕುರಿ, ಗೌಡಪ್ಪ ಬೊಮ್ಮನಳ್ಳಿ, ಶೇಕಪ್ಪ ಕಾಳಗಿ, ಬಸಣ್ಣ ಕುಂಬಾರ, ನಂದಣ್ಣ ವಾರಿ, ಸಿದ್ದಣ್ಣ ದೇಸಾಯಿ ಸೇರಿದಂತೆ ಪುರಸಭೆ ಸದಸ್ಯರು, ಬಸವ ಮಾಲೆ ಧಾರಿಗಳು, ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಭಕ್ತವೃಂದ ವಿವಿಧ ಗ್ರಾಮಗಳಿಂದ ಆಗಮಿಸಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್ಐ ಅಯ್ಯಪ್ಪ, ಭಾಗಣ್ಣ, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.