ADVERTISEMENT

ನಗದಿಗಾಗಿ ಬ್ಯಾಂಕ್‌ ಸಿಬ್ಬಂದಿ ಅಲೆದಾಟ

ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಶಾಖೆಯ ವ್ಯವಾಸ್ಥಾಪಕರು ಹೈರಾಣು

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:28 IST
Last Updated 18 ಜನವರಿ 2026, 5:28 IST
ಶಹಾಪುರ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಟ್ಟಡ
ಶಹಾಪುರ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಟ್ಟಡ   

ಶಹಾಪುರ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ (ಕೆಜಿಬಿ) ಗ್ರಾಮೀಣ ಪ್ರದೇಶದ ಬ್ಯಾಂಕಿನ ವ್ಯವಸ್ಥಾಪಕರು ವಾರದಲ್ಲಿ ಮೂರು ದಿನ ಜಿಲ್ಲೆಯ ವಿವಿಧ ಕಡೆ ತಮ್ಮ ಶಾಖೆಗೆ ಹಣ ತರುವುದು ಬ್ಯಾಂಕಿನ ಮ್ಯಾನೇಜರ್ ಕಾಯಕವಾಗಿ ಬಿಟ್ಟಿದೆ. ಹೀಗಾಗಿ ಅನುಕೂಲಕ್ಕಿಂತ ಅನಾನುಕೂಲವೇ ಅಧಿಕವಾಗಿದೆ ಎಂಬ ಅಳಲನ್ನು ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.

‘ಗ್ರಾಮೀಣ ಪ್ರದೇಶದ ಮೂರು ನಾಲ್ಕು ಬ್ಯಾಂಕ್‌ ವ್ಯವಸ್ಥಾಪಕರು ಕೂಡಿಕೊಂಡು ಖಾಸಗಿ ವಾಹನವನ್ನು ತೆಗೆದುಕೊಂಡು ಕ್ಯಾಶ್ (ಹಣ) ತರಲು ಸುರಪುರ, ಯಾದಗಿರಿ, ಹುಣಸಗಿ, ಲಿಂಗಸೂಗೂರ ಶಾಖೆಗೆ ತೆರಳಿದಾಗ ಪ್ರತಿಯೊಬ್ಬ ವ್ಯವಸ್ಥಾಪಕರಿಗೆ ₹ 25ಲಕ್ಷ ನೀಡುತ್ತಾರೆ. ಅದನ್ನು ನಮ್ಮ ಶಾಖೆಗೆ ತಂದು ಜಮಾ ಮಾಡುತ್ತೇವೆ. ಅದು ಒಂದು ದಿನದಲ್ಲಿಯೇ ಖಾಲಿ ಆಗಿ ಬಿಡುತ್ತದೆ. ಅನಿವಾರ್ಯವಾಗಿ ನಾವು ಗ್ರಾಹಕರಿಗೆ ₹ 50ಸಾವಿರಕ್ಕಿಂತ ಹೆಚ್ಚು ನೀಡುವುದಿಲ್ಲ. ಇದು ಹಲವು ತಿಂಗಳಿಂದ ಸಮಸ್ಯೆ ಬಿಗಡಾಯಿಸಿದೆ’ ಎಂದು ಹೆಸರು ಹೇಳಲು ಇಚ್ಛಿಸಿದ ಬ್ಯಾಂಕಿನ ವ್ಯವಸ್ಥಾಪಕರು ಒಬ್ಬರು ತಿಳಿಸಿದರು.

‘ಬೇರೆ ಬೇರೆ ಪ್ರದೇಶದಿಂದ ಕ್ಯಾಶ್ ತರುವಾಗ ಯಾವುದೇ ಭದ್ರತೆ ಇಲ್ಲ. ಖಾಸಗಿ ವಾಹನ ತೆಗೆದುಕೊಂಡು ಸಿಬ್ಬಂದಿ ಜತೆ ಹೋಗುತ್ತೇವೆ. ಹಣ ತರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಬರುತ್ತೇವೆ. ತುಸು ಹೆಚ್ಚುಕಡಿಮೆಯಾದರೆ ನಮ್ಮ ನೌಕರಿ ಹೋಗುವುದರ ಜತೆಯಲ್ಲಿ ಜೀವ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎನ್ನುತ್ತಾರೆ’ ಬ್ಯಾಂಕ್ ಸಿಬ್ಬಂದಿ ಒಬ್ಬರು.

ADVERTISEMENT

‘ಗ್ರಾಹಕರು ಬ್ಯಾಂಕಿಗೆ ಆಗಮಿಸಿದಾಗ ವ್ಯವಸ್ಥಾಪಕರು ಇಲ್ಲದಿರುವುದನ್ನು ಕಂಡು ಗರಂ ಆಗಿ ಬಿಡುತ್ತಾರೆ. ಸಿಬ್ಬಂದಿ ಜತೆ ಜಗಳಕ್ಕೆ ಮುಂದಾಗುತ್ತಾರೆ. ಇದರಿಂದ ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ನೀಡಲು ಆಗದೆ ಅಸಹಾಯಕತೆಯ ಸ್ಥಿತಿ ಸಿಬ್ಬಂದಿ ತಲುಪಿದ್ದಾರೆ. ನಗರ ಪ್ರದೇಶಕ್ಕೆ ತೆರಳಿ ಹೊಸ ಖಾತೆ ತೆರೆಯಬೇಕು ಎಂದರೆ ಅದು ಸಾಧ್ಯವಾಗುತ್ತಿಲ್ಲ. ಹದಗೆಟ್ಟು ಹೋಗಿರುವ ಬ್ಯಾಂಕಿನ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು’ ಎಂದು ಗ್ರಾಮೀಣ ಪ್ರದೇಶದ ಜನತೆಯು ಲೀಡ್ ಬ್ಯಾಂಕ್ ಅಧಿಕಾರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.