ಯಾದಗಿರಿ: ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಯಾದಗಿರಿ ಜಿಲ್ಲೆಯ 11 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ.
2025–26ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ 474 ಶಾಲೆಗಳನ್ನು ಉನ್ನತೀಕರಣಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ (ಯೋಜನೆ) ಆದೇಶ ಹೊರಡಿಸಿದ್ದಾರೆ. 474 ಶಾಲೆಗಳ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯ 11 ಶಾಲೆಗಳು ಸ್ಥಾನ ಪಡೆದಿವೆ.
ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಹುಣಸಗಿ ಯುಕೆಪಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ, ಹೇಮನೂರ (ಆರ್‌ಎಂಎಸ್‌ಎ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಜ್ಜಲ ಆದರ್ಶ ವಿದ್ಯಾಲಯ (ಆರ್‌ಎಸ್‌ಎ) ಶಾಲೆಗಳಿವೆ.
ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಹೋತಪೇಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಕೇರಾದ ಸರ್ಕಾರಿ ಪ್ರೌಢಶಾಲೆ, ಮುಡಬೂಳದ ಸರ್ಕಾರಿ ಪ್ರೌಢಶಾಲೆ ಹಾಗೂ ಟಿ–ವಡಗೇರಾದ ಸರ್ಕಾರಿ ಹಿರಿಯ ಪ್ರಾಥಮಿಕ–ಎಚ್‌ಎಸ್ ಶಾಲೆಗಳು ಮೇಲ್ಡರ್ಜೆಗೆ ಏರಿಸಲಾದ ಪಟ್ಟಿಯಲ್ಲಿವೆ.
ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರದೇಶದಲ್ಲಿನ ಹೊನಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹತ್ತಿಕುಣಿಯ ಸರ್ಕಾರಿ ಪ್ರೌಢ ಶಾಲೆ, ಅರಕೇರಾ (ಕೆ) ಸರ್ಕಾರಿ ಪ್ರೌಢಶಾಲೆ ಹಾಗೂ ನಾಯ್ಕಲ್‌ನ ಸರ್ಕಾರಿ ಪ್ರೌಢಶಾಲೆಗಳು ಸ್ಥಾನ ಪಡೆದಿವೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ, ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದೆ. ಇದಕ್ಕೆ ಪರಿಹಾರವಾಗಿ ಒಂದೇ ಆವರಣದಲ್ಲಿ ಪ್ರಾಥಮಿಕ ತರಗತಿಯಿಂದ ಪಿಯುವರೆಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲು ಮುಂದಾಗಿದೆ. ಅಭೂತಪೂರ್ವ ಬದಲಾವಣೆ, ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ದಾಖಲಾತಿ ಹೆಚ್ಚಳಕ್ಕೆ ಸುಧಾರಣಾತ್ಮಕ ಕಾರ್ಯತಂತ್ರವನ್ನಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಬಳಕೆ ಮಾಡಿಕೊಳ್ಳಲ್ಲಾಗುತ್ತಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ 200 ಶಾಲೆಗಳನ್ನು ಕೆಪಿಎಸ್ ಆಗಿ ಮೇಲ್ದರ್ಜೆಗೆ ಏರಿಕೆ ಮಾಡಲಾಗುತ್ತಿದೆ. ಪ್ರತಿ ಶಾಲೆಗೆ ₹ 2 ಕೋಟಿಯಿಂದ ₹ 4 ಕೋಟಿ ಅನುದಾನ ಬೇಕಾಗುತ್ತದೆ. ಈ 200 ಶಾಲೆಗಳಿಗೆ ಬೇಕಾದ ಅಗತ್ಯವಾದ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಅಕ್ಷರ ಆವಿಷ್ಕಾರ ಯೋಜನೆಯ ಮೂಲಕ ಭರಿಸಲಿದೆ.
ಏಕರೂಪ ನೀತಿ ಪಾಲಿಸಲು ಆದೇಶ
ಎಲ್ಲ ಕೆಪಿಎಸ್‌ಗಳು ಏಕರೂಪದ ನೀತಿ ಪಾಲಿಸಲು ಕರ್ನಾಟಕ ಪಬ್ಲಿಕ್ ಶಾಲಾ ಮಾನಕ ಕೈಪಿಡಿ ಆಳವಡಿಕೆ ಹಾಗೂ ಗುಣಮಟ್ಟದ ಕನಿಷ್ಠ ಮಾನದಂಡಗಳ ಹೊಂದುವುದು ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ ಬೋಧನೆಯನ್ನು ಅಳವಡಿಸಿಕೊಳ್ಳಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
6ರಿಂದ 10ನೇ ತರಗತಿ ವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು ಮತ್ತು ಕ್ರಿಯಾಶೀಲ ಬೋಧನಾ ಪದ್ಧತಿ 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಪರಿಚಯ 6ನೇ ತರಗತಿಯಿಂದ ಉದ್ಯಮ ಸಮ್ಮಿಳಿತ ವೃತ್ತಿಪರ ಕೌಶಲ ಆಧಾರಿತ ಪಠ್ಯ 8ನೇ ತರಗತಿಯಿಂದ ಮಂಡಳಿ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮರ್ಥ್ಯ ಅಭಿವೃದ್ಧಿಯ ತರಗತಿಗಳನ್ನು ಪ್ರಾರಂಭಿಸಲು ಅನುಮತಿಸಿದೆ. ಈ ಸಂಬಂಧ ಅಗತ್ಯಗಳನ್ನು ಗುರುತಿಸಿ ವಿಸ್ತೃತ ಪ್ರಸ್ತಾವನೆಯನ್ನು ತುರ್ತಾಗಿ ಸಿದ್ಧಪಡಿಸಿ ಸಲ್ಲಿಕೆ ಮಾಡುವಂತೆಯೂ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.