ADVERTISEMENT

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಗದ್ದುಗೆ ಹಿಡಿಯಲು ಪಕ್ಷಗಳ ಕಸರತ್ತು

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 14ರಂದು ಚುನಾವಣೆ

ಪವನ ಕುಲಕರ್ಣಿ
Published 10 ಫೆಬ್ರುವರಿ 2025, 4:56 IST
Last Updated 10 ಫೆಬ್ರುವರಿ 2025, 4:56 IST
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಶನಿವಾರ ಪುರಸಭೆಯ ಬಿಜೆಪಿ ಪಕ್ಷದ ಸದಸ್ಯರನ್ನು ಭೇಟಿಯಾಗಿ ಪಕ್ಷದ ವಿಪ್ ನೋಟಿಸ್‌ ನೀಡಿದರು. ಸಂಗಣ್ಣ ತುಂಬಗಿ ಜೊತೆಗಿದ್ದರು
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಶನಿವಾರ ಪುರಸಭೆಯ ಬಿಜೆಪಿ ಪಕ್ಷದ ಸದಸ್ಯರನ್ನು ಭೇಟಿಯಾಗಿ ಪಕ್ಷದ ವಿಪ್ ನೋಟಿಸ್‌ ನೀಡಿದರು. ಸಂಗಣ್ಣ ತುಂಬಗಿ ಜೊತೆಗಿದ್ದರು   

ಕೆಂಭಾವಿ: ಪಟ್ಟಣದ ಪುರಸಭೆಗೆ ನಡೆಯಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ.

ಫೆ.14ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, 23 ಸದಸ್ಯರಲ್ಲಿ 13 ಜನ ಬಿಜೆಪಿ ಸದಸ್ಯರು, 8 ಜನ ಕಾಂಗ್ರೆಸ್‌ ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಜಯಗಳಿಸಿದ ಐವರು ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಲು ಸಜ್ಜಾಗಿದ್ದಾರೆ. ಹೆಚ್ಚಿನ ಸದಸ್ಯರಿದ್ದರೂ ಬಿಜೆಪಿಗೆ ಅಧಿಕಾರಿ ಕೈ ತಪ್ಪಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಪುರಸಭೆ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಮ್ಯಾಜಿಕ್ ನಂಬರ್ ಕಡೆಗೆ ಕಾಂಗ್ರೆಸ್ ಪಕ್ಷ ಬಂದು ತಲುಪಿದೆ. ಕಳೆದೈದು ತಿಂಗಳ ಹಿಂದೆ ಚುನಾವಣೆಯ ದಿನಾಂಕ ಘೋಷಣೆಯಾದಾಗ ಬಿಜೆಪಿ ಐದು ಜನ ಸದಸ್ಯರು ‘ಕೈ’ ತೆಕ್ಕೆಗೆ ಹಾರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದ್ದರಿಂದ ಈ ಚಟುವಟಿಕೆ ಅಷ್ಟಕ್ಕೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಎರಡೂ ಪಕ್ಷಗಳು ಅಧಿಕಾರದ ಚುಕ್ಕಣಿ ಹಿಡಿಯಲು ಇನ್ನಿಲ್ಲದ ಕಸರತ್ತು ಶುರು ಮಾಡಿವೆ.

ADVERTISEMENT

ಬಂಡಾಯದ ಭೀತಿ, ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಕೈ ತೆಕ್ಕೆಗೆ ಜಾರಿರುವ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಪಕ್ಷ ಹಲವು ಪ್ರಯತ್ನಗಳು ಮಾಡುತ್ತಿವೆ. ಕೆಲ ತಿಂಗಳ ಹಿಂದೆ ಬಿಜೆಪಿ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಅವರು ಬಿಜೆಪಿ ಬೆಂಬಲಿಗರೊಂದಿಗೆ ಪಕ್ಷದ ಸದಸ್ಯರ ಮನೆಗೆ ತೆರಳಿ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಯಾವ ಸಮಯದಲ್ಲೂ ಪಕ್ಷ ಬಿಡದಂತೆ ಮನವೊಲಿಸಿದ್ದರು.

ಈಗ ಇದೇ ಪ್ರಕ್ರಿಯೆ ಮುಂದುವರಿಸಿರುವ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಶನಿವಾರ ತಮ್ಮ ಪಕ್ಷದ ಸದಸ್ಯರನ್ನು ಭೇಟಿಯಾಗಿ ವಿಪ್ ಜಾರಿ ಮಾಡಿದ್ದಾರೆ. ಆದರೆ ಈಗಾಗಲೇ ಬಿಜೆಪಿಗೆ ಕೈಕೊಟ್ಟು ಕೈ ತೆಕ್ಕೆಯಲ್ಲಿ ಬಿದ್ದರುವ ಬಂಡಾಯ ಸದಸ್ಯರು ಚುನಾವಣೆಯಲ್ಲಿ ತಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯೂ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ 14 ರಂದು ನಡೆಯುವ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು ಚುನಾವಣೆ ನಂತರವಷ್ಟೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಕೆಲ ಸದಸ್ಯರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಮನೆಗೆ ತೆರಳಿ ವಿಪ್ ನೀಡಲಾಗಿದೆ. ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಅನಿವಾರ್ಯವಾಗಿದೆ
ಬಸವರಾಜ ವಿಭೂತಿಹಳ್ಳಿ ಬಿಜೆಪಿ ಜಿಲ್ಲಾಧ್ಯಕ್ಷ
ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಅಂದು ನಡೆಯುವ ಚುನಾವಣೆಯಲ್ಲಿ ಪಕ್ಷದ ಅನೇಕ ವರಿಷ್ಠರು ಭಾಗವಹಿಸಲಿದ್ದಾರೆ
ಬಸವರಾಜ ಚಿಂಚೋಳಿ. ಕಾಂಗ್ರೆಸ್‌ ವಲಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.